
ಯುಪಿ , ಮೇ 19: NEET ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಗುಂಪೊಂದು ಉತ್ತರಪ್ರದೇಶದ ಮಹೋಬದಿಂದ ಅಪಹರಿಸಿ 16 ದಿನಗಳ ಕಾಲ ವಶದಲ್ಲಿರಿಸಿದೆ ಎಂದು ಆರೋಪಿಸಲಾಗಿದೆ. ಈ ಅವಧಿಯಲ್ಲಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಮತ್ತು ಹಿಂಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.




ಮಹಿಳೆಯು ಏಪ್ರಿಲ್ 30ರಂದು ಕೋಚಿಂಗ್ ತರಗತಿಯಿಂದ ವಾಪಸಾಗುತ್ತಿದ್ದಾಗ ಮೋಹಿತ್ ಶ್ರೀವಾಸ್ತವ, ಅಂಕಿತ್ ಶ್ರೀವಾಸ್ತವ ಮತ್ತು ಅಲ್ಲು ರಾಜ್ಜುತ್ ಮುಂತಾದವರನ್ನು ಒಳಗೊಂಡ ಗುಂಪೊಂದು ಕಾರೊಂದರಲ್ಲಿ ಅಪಹರಿಸಿತ್ತು ಎನ್ನಲಾಗಿದೆ. ಕಾರಿನಲ್ಲಿ ಮಹಿಳೆಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿ ಅತ್ಯಾಚಾರ ನಡೆಸಲಾಗಿದೆ ಮತ್ತು ಆಕೆಯ ಖಾಸಗಿ ಚಿತ್ರಗಳನ್ನು ತೆಗೆಯಲಾಗಿದೆ ಎನ್ನಲಾಗಿದೆ.


ವಶದಲ್ಲಿದ್ದ ವೇಳೆ, ಗುಂಪು ಮಹಿಳೆಗೆ ಸಿಗರೆಟ್ಟಿಂದ ಸುಟ್ಟು ಮತ್ತು ಚಾಕುವಿನಿಂದ ಗೀರಿ ಹಿಂಸೆ ನೀಡಿದೆ ಎನ್ನಲಾಗಿದೆ.ಬಳಿಕ, ಮೇ 13ರಂದು ಮಹಿಳೆಯನ್ನು ಪ್ರಯಾಗ್ರಾಜ್ ಗೆ ಒಯ್ಯಲಾಯಿತು. ಅಲ್ಲಿ ಮೋಹಿತ್ನನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಮಹಿಳೆಯ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ಮಹಿಳೆಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.ಮೇ ಒಂದರಂದು ಮಹಿಳೆಯ ತಾಯಿ ನಾಪತ್ತೆ ದೂರು ನೀಡಿದ್ದಾರೆ. ಪೊಲೀಸರು ಎರಡು ವಾರಗಳ ಬಳಿಕ ಮಹಿಳೆಯನ್ನು ಪ್ರಯಾಗ್ರಾಮ್ನಲ್ಲಿ ಪತ್ತೆಹಚ್ಚಿದ್ದಾರೆ. ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








