


ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ `ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರಿಗೆ ಕರೆ ನೀಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ `ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳು ಸಾಧಿಸುತ್ತಿರುವ ಯಶಸ್ಸಿನ ಬಗ್ಗೆಯೂ ಪ್ರಸ್ತಾಪಿಸಿದರು. ಬಿಹಾರದ ಮಖಾನಾ ಮತ್ತು ಕರ್ನಾಟಕದ ತೊಗರಿ ಬೇಳೆ ವಿಶ್ವದಾದ್ಯಂತ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುತ್ತಿವೆ. ಮಹಾರಾಷ್ಟ್ರದ ಬುಡಕಟ್ಟು ಉತ್ಪನ್ನಗಳು ಬುಡಕಟ್ಟು ಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಪ್ಯಾಕೇಜಿಂಗ್ ಮೂಲಕ ಮನ್ನಣೆ ಗಳಿಸುತ್ತಿವೆ ಎಂದು ಮೋದಿ ಹೇಳಿದರು.
ಖಾದಿಯ ಜನಪ್ರಿಯತೆ ಹೆಚ್ಚುತ್ತಿದ್ದು, ದೇಶದ ಸಂಪ್ರದಾಯಗಳನ್ನು ಜೀವಂತವಾಗಿರಿಸಿರುವ ಕುಶಲಕರ್ಮಿಗಳಿಗೆ ಇದರಿಂದ ಬೆಂಬಲ ದೊರೆಯುತ್ತಿದೆ. ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ `ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಮತ್ತಷ್ಟು ಬಲಪಡಿಸೋಣ ಎಂದು ಅವರು ಕರೆ ನೀಡಿದರು.
ಇದೇ ವೇಳೆ ಪಂಜಾಬ್ನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಪುನರುಜ್ಜೀವನದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಖೇತಿ ವಿರಾಸತ್ ಮಿಷನ್’ ಎಂಬ ಸಂಸ್ಥೆ ಸಾವಯವ ಕೃಷಿಗೆ ಹೊಸ ಜೀವ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಪಂಜಾಬ್ನ ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕೃಷಿಯನ್ನು ಉತ್ತೇಜಿಸಲು ಈ ತಂಡ ಮುಂದಾಗಿದ್ದು, ಈ ಉಪಕ್ರಮಕ್ಕೆ ನವ್-ತ್ರಿಂಜನ್’ ಎಂದು ಹೆಸರಿಸಲಾಗಿದೆ ಎಂದು ಹೇಳಿದರು.
ಈ ಉಪಕ್ರಮದಡಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಹತ್ತಿಯನ್ನು ಬೆಳೆಯಲಾಗುತ್ತಿದೆ. ನೈಸರ್ಗಿಕ ಬಣ್ಣಗಳಿರುವ ಹತ್ತಿಯನ್ನೂ ಇಲ್ಲಿ ಬೆಳೆಯಲಾಗುತ್ತಿದ್ದು, ಇದರಿಂದ ತಯಾರಿಸುವ ನೂಲು ಮತ್ತು ಬಟ್ಟೆಗಳಿಗೆ ಬಣ್ಣ ಹಚ್ಚಲು ಪ್ರತ್ಯೇಕ ರಾಸಾಯನಿಕಗಳ ಅಗತ್ಯವಿರುವುದಿಲ್ಲ ಎಂದು ಅವರು ವಿವರಿಸಿದರು. ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಜನರು ಹೆವಲ್ ನದಿಗೆ ಮರುಜೀವ ನೀಡಲು ಒಗ್ಗಟ್ಟಿನಿಂದ ಕೈಗೊಂಡ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಕೆಲವು ವರ್ಷಗಳ ಹಿಂದೆ ಹೆವಲ್ ನದಿಯ ನೀರಿನ ಹರಿವು ಕಡಿಮೆಯಾಗತೊಡಗಿತ್ತು. ನದಿಯ ಸುತ್ತಮುತ್ತಲಿನ ನೈಸರ್ಗಿಕ ಜಲಮೂಲಗಳೂ ಬತ್ತಿಹೋಗುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ಕೈಜೋಡಿಸಿ ಹೆವಲ್ ನದಿಯನ್ನು ಉಳಿಸುವ ಅಭಿಯಾನ ಆರಂಭಿಸಿದರು. ಈ ಸಂದರ್ಭದಲ್ಲಿ ಮಳೆನೀರನ್ನು ಸಂಗ್ರಹಿಸುವುದು, ನೀರು ಭೂಮಿಯೊಳಗೆ ಇಂಗುವಂತೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಗಳನ್ನು ಮಾಡಲಾಯಿತು. ಇಂದು ಈ ಉಪಕ್ರಮದಿಂದ ಹೆವಲ್ ನದಿಗೆ ಮರುಜೀವ ದೊರೆತಿದ್ದು, ಜೊತೆಗೆ ಹತ್ತಾರು ನೈಸರ್ಗಿಕ ಜಲಮೂಲಗಳ ಪುನರುಜ್ಜೀವನಕ್ಕೂ ಸಹಾಯವಾಗಿದೆ ಎಂದು ಅವರು ಹೇಳಿದರು.








