
ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ನಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಈ ಘಟನೆಯನ್ನು ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿಸಿರುವುದಾಗಿ ಬುಧವಾರ ಕಂದಾಯ ಸಚಿವ ಕೆ.ರಾಜನ್ ತಿಳಿಸಿದರು. ಇಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆ.ರಾಜನ್, “ಸ್ಫೋಟ ಸಂಭವಿಸಿದ ಬಳಿಕ ಬೆಳಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಆನ್ ಲೈನ್ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 14 ಲಕ್ಷ ರೂ. ಆರ್ಥಿಕ ನೆರವು ನೀಡಲೂ ಸಹ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಈ ಸ್ಫೋಟವನ್ನು ರಾಜ್ಯ ನಿರ್ದಿಷ್ಟ ವಿಪತ್ತು ಎಂದು ಘೋಷಿಸಲು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.ಇದರೊಂದಿಗೆ, ಘಟನೆ ಕುರಿತು ನ್ಯಾಯಾಂಗ ತನಿಖೆಗೂ ಸರಕಾರ ಆದೇಶಿಸಿದೆ. ನ್ಯಾ. ಸಿ.ಎನ್.ರಾಮಚಂದ್ರನ್ ನಾಯರ್ ನೇತೃತ್ವದ ಏಕಸದಸ್ಯ ಸಮಿತಿ ಈ ಕುರಿತು ತನಿಖೆ ನಡೆಸಲಿದೆ ಎಂದೂ ಅವರು ತಿಳಿಸಿದರು.











