Sunday, July 19, 2026
spot_imgspot_img
spot_imgspot_img

“4 ವರ್ಷದ ಅತ್ಯಾಚಾರ ಸಂತ್ರಸ್ತ ಮಗುವಿಗೆ 2 ಆಸ್ಪತ್ರೆಯಿಂದ ಚಿಕಿತ್ಸೆ ನಿರಾಕರಣೆ-“ಕರ್ತವ್ಯ ಮರೆತ ವೈದ್ಯರು ‘ಡಾಕ್ಟರ್’ ಎಂಬ ಪದವಿಗೆ ಅರ್ಹರಲ್ಲ,”ನಿಮ್ಮ ಹೆಸರಿನಿಂದ ಡಾಕ್ಟರ್ ತೆಗೆದುಹಾಕಿ”-ವೈದ್ಯರಿಗೆ ಸುಪ್ರೀಂ ಕೋರ್ಟ್ ಛೀಮಾರಿ

- Advertisement -
- Advertisement -

ಹೊಸದಿಲ್ಲಿ: ನಾಲ್ಕು ವರ್ಷದ ಅತ್ಯಾಚಾರ ಸಂತ್ರಸ್ತ ಮಗುವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ವಿಫಲವಾಗಿ ಆಕೆಯ ಸಾವಿಗೆ ಕಾರಣವಾದ ಉತ್ತರಪ್ರದೇಶದ ಘಾಝಿಯಾಬಾದ್‌ನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

“ಆ ಬಾಲಕಿ ಬಡ ಕುಟುಂಬದ ಮಗುವಾಗಿತ್ತು, ಹಾಗಾಗಿ ನೀವು ಆಕೆಯನ್ನು ನಿರ್ಲಕ್ಷಿಸಿದಿರಿ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ನ್ಯಾಯಪೀಠವೊಂದು ಆಸ್ಪತ್ರೆಗಳನ್ನು ಉದ್ದೇಶಿಸಿ ಹೇಳಿತು.

ನೀವು ನಿಮ್ಮ ಕರ್ತವ್ಯವನ್ನು ಮಾಡಲು ವಿಫಲವಾಗಿರುವುದರಿಂದ ನಿಮ್ಮ ಹೆಸರುಗಳಿಂದ ‘ಡಾಕ್ಟರ್‌’ನ್ನು ತೆಗೆದುಹಾಕಿ ಎಂಬುದಾಗಿಯೂ ಆಕ್ರೋಶಭರಿತ ನ್ಯಾಯಾಲಯವು ಆಸ್ಪತ್ರೆಗಳಿಗೆ ಹೇಳಿತು.

ಘಾಝಿಯಾಬಾದ್‌ನಲ್ಲಿ ಮಾರ್ಚ್‌ 16ರಂದು ನಡೆದ ನಾಲ್ಕು ವರ್ಷದ ಮಗುವೊಂದರ ಅತ್ಯಾಚಾರ- ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ನೆರೆಮನೆಯ ವ್ಯಕ್ತಿಯೊಬ್ಬ ಚಾಕೊಲೇಟ್ ಕೊಡುವ ಆಮಿಷವೊಡ್ಡಿ ಮಗುವನ್ನು ಮನೆಯಿಂದ ಕರೆದುಕೊಂಡು ಹೋದನು. ಮಗು ಮರಳದೆ ಇದ್ದಾಗ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದರು. ಬಳಿಕ, ಮನೆ ಪಕ್ಕದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮಗು ಪತ್ತೆಯಾಯಿತು.

ಮನೆಯವರು ಮಗುವನ್ನು ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು. ಆದರೆ, ಆ ಆಸ್ಪತ್ರೆಗಳು ಮಗುವಿಗೆ ಆಸ್ಪತ್ರೆಗೆ ಪ್ರವೇಶ ನಿರಾಕರಿಸಿತು.

ಬಳಿಕ, ಮಗುವನ್ನು ಘಾಝಿಯಾಬಾದ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಮಗು ಮೃತಪಟ್ಟಿದೆ ಎಂಬುದಾಗಿ ವೈದ್ಯರು ಘೋಷಿಸಿದರು.

ಮಗು ಪತ್ತೆಯಾದ ಬಳಿಕ ಎರಡು ಗಂಟೆಗಳ ಕಾಲ ಮಗು ಜೀವಂತವಾಗಿತ್ತು ಎಂದು ತಂದೆ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಪತ್ರೆಗಳು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲಿಲ್ಲ ಎಂಬ ತಂದೆಯ ಆರೋಪದಲ್ಲಿ ಸತ್ಯವಿರುವುದನ್ನು ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡವೊಂದು ಪತ್ತೆಹಚ್ಚಿದೆ.

“ನೀವು ನಿಮ್ಮ ಕರ್ತವ್ಯವನ್ನು ಮಾಡದಿದ್ದರೆ ನಿಮ್ಮ ಹೆಸರಿನ ಜೊತೆ ‘ಡಾಕ್ಟ‌ರ್’ ಎಂದು ನೀವು ಬರೆಯಬಾರದು” ಎಂದು ಆಕ್ರೋಶಭರಿತ ಮುಖ್ಯ ನ್ಯಾಯಾಧೀಶರು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಹೇಳಿದರು.

ಅವರಲ್ಲಿ ಹಣ ಇಲ್ಲ ಎಂದು ನೀವು ಚಿಕಿತ್ಸೆ ಕೊಡಲಿಲ್ಲ…

“ನಿಮಗೆ ಸಂವೇದನೆ ಇದ್ದಿದ್ದರೆ, ನಿಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದರೆ ಮಗುವಿನ ಜೊತೆಗೆ ಇನ್ನೊಂದು ಆಸ್ಪತ್ರೆಗೆ ಹೋಗುತ್ತಿದ್ದಿರಿ. ಅದು ಬಡು ಕುಟುಂಬದ ಮಗು ಆಗಿದ್ದರಿಂದ ನೀವು ಆಕೆಯನ್ನು ನಿರ್ಲಕ್ಷಿಸಿದಿರಿ. ನಿಮ್ಮಶುಲ್ಕವನ್ನು ಕೊಡಲು ಅವರಲ್ಲಿ ಹಣ ಇಲ್ಲ ಎಂಬ ಕಾರಣಕ್ಕಾಗಿ ನೀವು ಚಿಕಿತ್ಸೆ ನಿರಾಕರಿಸಿದಿರಿ” ಎಂದು ಅವರು ಹೇಳಿದರು.

ದಂಡವಾಗಿ, ಮೃತ ಮಗುವಿನ ಕುಟುಂಬಕ್ಕೆ ಸ್ವಯಂಪ್ರೇರಿತ ದೇಣಿಗೆಗಳನ್ನು ನೀಡಿ ಎಂದು ನ್ಯಾಯಾಲಯವು ಎರಡು ಆಸ್ಪತ್ರೆಗಳಿಗೆ ಸೂಚಿಸಿತು. ಇದನ್ನು ನಿರ್ಲಕ್ಷಿಸಿದರೆ ನಿಮಗೆ ನಾವೇ ದಂಡ ವಿಧಿಸುತ್ತೇವೆ ಎಂದು ಅದು ಎಚ್ಚರಿಸಿತು.

- Advertisement -

Related news

error: Content is protected !!