Wednesday, July 22, 2026
spot_imgspot_img
spot_imgspot_img

‘ಶೀಘ್ರದಲ್ಲೇ ಸರ್ಕಾರಿ, ಅನುದಾನಿತ ಶಾಲೆಗಳಿಗೆ 18,000 ಶಿಕ್ಷಕರ ನೇಮಕಾತಿ’- ಮಧು ಬಂಗಾರಪ್ಪ ಮಾಹಿತಿ

- Advertisement -
- Advertisement -

ಮಡಿಕೇರಿ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ 12,000 ಹಾಗೂ ಅನುದಾನಿತ ಶಾಲೆಗಳಿಗೆ 6,000 ಸೇರಿ ಒಟ್ಟು 18,000 ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಕೊಡಗಿನ ಸೋಮವಾರ ಪೇಟೆ ಬಳಿಯ ಸರ್ಕಾರಿ ಶಾಲೆಯೊಂದರಲ್ಲಿ ಮಾತನಾಡಿದ ಅವರು, “ಸರ್ಕಾರಿ ಶಾಲೆಯನ್ನು ಬಲಪಡಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ಪೂರ್ವ ಕಿರಿಯ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಆರಂಭಿಸಲಾಗಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಸುಮಾರು 900 ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಸಾರಿಗೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ” ಎಂದು ಹೇಳಿದರು.

“ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೂ ಗಮನ ಹರಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಸಂಜೆ ವೇಳೆಯಲ್ಲಿ ವಿಶೇಷ ತರಗತಿ ನಡೆಸಿ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಗಮನಹರಿಸಲಾಗಿದೆ. ಒಟ್ಟಾರೆ ಸರ್ಕಾರಿ ಶಾಲೆಗಳ ಸುಧಾರಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ” ಎಂದು ತಿಳಿಸಿದರು.

“ರಾಜ್ಯದಲ್ಲಿ 46,000 ಸರ್ಕಾರಿ ಶಾಲೆಗಳು, 57,000 ಅನುದಾನಿತ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಎಲ್‌ಕೆಜಿ ಯಿಂದ 12ನೇ ತರಗತಿ ವರೆಗೆ ಸುಮಾರು 1.16 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರದ ಬೆಳವಣಿಗೆಗೆ ಶಿಕ್ಷಣದಿಂದ ಮಾತ್ರ ಸಾಧ್ಯ, ಆ ನಿಟ್ಟಿನಲ್ಲಿ ಸರ್ಕಾರ ಹಲವು ಸಮಸ್ಯೆಗಳ ನಡುವೆಯೂ ಅಗತ್ಯ ಮೂಲಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಿದೆ” ಎಂದು ವಿವರಿಸಿದರು.

- Advertisement -

Related news

error: Content is protected !!