





ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತದತ್ತ ಎಲ್‌ಪಿಜಿ ಮತ್ತು ಕಚ್ಚಾ ತೈಲ ಪೂರೈಕೆ ಮುಂದುವರಿದಿದ್ದು, ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ಸಿಮಿ ಎಲ್‌ಪಿಜಿ ಟ್ಯಾಂಕರ್ ಸುರಕ್ಷಿತವಾಗಿ ಗುಜರಾತ್‌ನ ಕಾಂಡ್ಲಾದ ದೀನ್‌ದಯಾಳ್ ಬಂದರನ್ನು ತಲುಪಿದೆ.
ಸುಮಾರು 20,000 ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಸಾಗಿಸುತ್ತಿದ್ದ ಈ ಟ್ಯಾಂಕರ್ ಮೇ 13 ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು, ಎಂಟು ಉಕ್ರೇನಿಯನ್ನರು ಮತ್ತು 13 ಫಿಲಿಪಿನೋ ಸಿಬ್ಬಂದಿ ಸೇರಿದ್ದಾರೆ.
ಪ್ರಸ್ತುತ ಮೇಲ್ವಿಚಾರಣೆಯಡಿಯಲ್ಲಿ ಹಾರ್ಮುಜ್ ಜಲಸಂಧಿ ದಾಟಿದ 11ನೇ ಎಲ್‌ಪಿಜಿ ಟ್ಯಾಂಕರ್ ಇದಾಗಿದ್ದು, ಡಿಜಿ ಶಿಪ್ಪಿಂಗ್, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯಗಳ ಸಮನ್ವಯದಿಂದ ಈ ಮಾರ್ಗದಿಂದ ಹಡಗುಗಳು ಸುರಕ್ಷಿತವಾಗಿ ಸಂಚರಿಸುತ್ತಿವೆ ಎಂದು ತಿಳಿಸಲಾಗಿದೆ.
ಸರಕು ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಮಾಹಿತಿಯ ಪ್ರಕಾರ, ಭಾರತದ ಒಟ್ಟು ಕಚ್ಚಾ ತೈಲ ದಾಸ್ತಾನು ಫೆಬ್ರವರಿ ಅಂತ್ಯದಲ್ಲಿ 107 ಮಿಲಿಯನ್ ಬ್ಯಾರೆಲ್ ಇತ್ತು. ಆದರೆ, ಈಗ ಅದು 91 ಮಿಲಿಯನ್ ಬ್ಯಾರೆಲ್‌ಗೆ ಇಳಿದಿದೆ. ಅಂದರೆ ಸುಮಾರು 15% ರಷ್ಟು ಇಳಿಕೆಯಾಗಿದೆ. ಪ್ರಸ್ತುತ ಬಳಕೆಯ ಮಟ್ಟವನ್ನು ಗಮನಿಸಿದರೆ, ಭಾರತದ ಲಭ್ಯವಿರುವ ಕಚ್ಚಾ ತೈಲ ದಾಸ್ತಾನು ಕೇವಲ 18 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ಮಾತ್ರ ಉಳಿದಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ಸಂಸ್ಕರಣಾಗಾರಗಳು ಈಗಾಗಲೇ ತಮ್ಮ ಕಾರ್ಯಾಚರಣೆಯನ್ನು ಸ್ಥಿರವಾಗಿ ಮುಂದುವರಿಸಿವೆ. ಆದರೆ ಪೂರೈಕೆಯಲ್ಲಿ ಇನ್ನಷ್ಟು ಅಡಚಣೆ ಉಂಟಾದರೆ, ಕಚ್ಚಾ ತೈಲ ಸಂಸ್ಕರಣೆಯನ್ನು ಕಡಿಮೆ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಜಾಗತಿಕ ಮಟ್ಟದಲ್ಲೂ ತೈಲ ದಾಸ್ತಾನು ವೇಗವಾಗಿ ಕುಸಿಯುತ್ತಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ವಿಶ್ವದ ತೈಲ ದಾಸ್ತಾನು 129 ಮಿಲಿಯನ್ ಬ್ಯಾರೆಲ್‌ಗಳಷ್ಟು ಕುಸಿದಿದ್ದು, ಏಪ್ರಿಲ್‌ನಲ್ಲಿ 117 ಮಿಲಿಯನ್ ಬ್ಯಾರೆಲ್ ಇಳಿಕೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.








