Thursday, July 23, 2026
spot_imgspot_img
spot_imgspot_img

ಸಂಗಾತಿಗಳು ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲವೆನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ-ಹೈಕೋರ್ಟ್

- Advertisement -
- Advertisement -

ಬೆಂಗಳೂರು: ಹಿಂದೂ ಕಾನೂನಿನಡಿಯಲ್ಲಿ ಮದುವೆ ಒಂದು ಸಂಸ್ಕಾರ ಮತ್ತು ಅದು ಒಪ್ಪಂದವಲ್ಲ. ಆದ್ದರಿಂದ, ಮದುವೆಯಾದ ನಂತರ ದಂಪತಿ ಜತೆಯಾಗಿ ಜೀವನ ಸಾಗಿಸಬೇಕು. ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲವೆನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ವಿವಾಹ ವಿಚ್ಚೇದನ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದೆ.

ಮೈಸೂರು ಮೂಲದ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ವ್ಯಕ್ತಿಯೊಬ್ಬ ತನ್ನ ಸಂಗಾತಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ಮದುವೆಯಿಂದ ದೂರ ಸರಿದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.ವಿವಾಹ ವಿಚ್ಚೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಮೈಸೂರಿನ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಅದೇಶ ಪ್ರಶ್ನಿಸಿ ಪತಿ ಹಿಂದಿ ವಿವಾಹ ಕಾಯ್ದೆ ಸೆಕ್ಷನ್‌ 13(1)(ಎ) ಅಡಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ಹಿಂದೂ ಕಾನೂನಿನಡಿಯಲ್ಲಿ ಮದುವೆ ಎನ್ನುವುದು ಒಂದು ಸಂಸ್ಕಾರ ಮತ್ತು ಅದು ಒಪ್ಪಂದವಲ್ಲ ಎಂದು ಹೇಳಿದೆ.

ಹಾಲಿ ಪ್ರಕರಣದಲ್ಲಿ ಪ್ರೇಮ ವಿವಾಹವಾಗಿ, ಹೆಣ್ಣುಮಗುವಿನ ತಂದೆಯಾಗಿ, ನಂತರ ನ್ಯಾಯಾಲಯದ ಮೊರೆ ಹೋಗಿ, ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡು ಮೇಲ್ಮನವಿದಾರರು ತಮ್ಮ ತಪ್ಪಿನ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಕಾನೂನಿನಡಿಯಲ್ಲಿ ವಿವಾಹವು ಒಪ್ಪಂದವಲ್ಲ ಹಾಗೂ ಪತಿ ಅಥವಾ ಪತ್ನಿ ಆಸಕ್ತಿಯ ಕೊರತೆಯನ್ನು ಉಲ್ಲೇಖಿಸಿ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.ಮೇಲ್ಮನವಿದಾರರು 2003ರ ಡಿಸೆಂಬರ್‌ 15ರಂದು ವಿವಾಹವಾಗಿದ್ದರು.

ಇಬ್ಬರದ್ದೂ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ ಈಗ ವಯಸ್ಕ ಮಗಳಿದ್ದಾಳೆ. ಮದುವೆಯಾಗಿ ಸುಮಾರು ಎರಡು ದಶಕಗಳ ನಂತರ 2019ರಲ್ಲಿ ಮೊದಲ ಸುತ್ತಿನ ದಾವೆಯ ನಂತರ ಪತಿ ವಿಚ್ಛೇದನವನ್ನು ಕೋರಿದ್ದರು. ಆದರೆ, ಪತ್ನಿ ಸೆಕ್ಷನ್‌ 9ರಡಿಯಲ್ಲಿ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಕೋರಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಯ ವೈವಾಹಿಕ ಸಂಬಂಧ ಮರುಸ್ಥಾಪನೆ ಅರ್ಜಿ ಮಾನ್ಯ ಮಾಡಿ, ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿತ್ತು.

ಇದರಿಂದ, ಸೆಕ್ಷನ್‌ 13(1)(ಎ) ಅಡಿಯಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರ ಪತಿ, ವೈವಾಹಿಕ ಸಂಬಂಧ ಮರುಸ್ಥಾಪನೆ ಆದೇಶದ ಹೊರತಾಗಿಯೂ ಪತ್ನಿ ಸಹಬಾಳ್ವೆ ಪುನರಾರಂಭಿಸಲಿಲ್ಲ. ಹೆಂಡತಿಯನ್ನು ತನ್ನೊಂದಿಗೆ ಸೇರಲು ಮನವೊಲಿಸುವ ಪ್ರಯತ್ನಗಳು ವಿಫಲವಾಗಿವೆ ಮತ್ತು ಮದುವೆಯು ಮುರಿದುಬಿದ್ದಿದೆ. ಆದ್ದರಿಂದ, ವಿಚ್ಚೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು.

- Advertisement -

Related news

error: Content is protected !!