Sunday, July 26, 2026
spot_imgspot_img
spot_imgspot_img

ಮಂಗಳೂರು: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ನಿರ್ಧಾರವನ್ನು ವಿರೋಧಿಸಿ ಸಿಪಿಐಎಂ ಧರಣಿ

- Advertisement -
- Advertisement -

ಮಂಗಳೂರು, ಮೇ 14: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ನಿರ್ಧಾರವನ್ನು ವಿರೋಧಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಗುರುವಾರ ಮೆರವಣಿಗೆ ಹಾಗೂ ಧರಣಿ ನಡೆಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಸಿಪಿಎಂ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸಿ, ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದರು.ಮೆರವಣಿಗೆಯುದ್ದಕ್ಕೂ ಆರೋಗ್ಯ ಸಚಿವರ ವಿರುದ್ಧ ಧರಣಿನಿರತರು ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ವಹಿಸಿದ್ದರು.

ರೋಗಿಗಳ ಪಾಲಿಗೆ ನರಕವಾಗಿದೆ:

ಧರಣಿಯನ್ನುದ್ದೆಶೀಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ದಕ್ಷಿಣ ಕನ್ನಡ ಜಿಲ್ಲೆ ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗೂ ಕಾರ್ಪೊರೇಟ್ ಖಾಸಗಿ ಆಸ್ಪತ್ರೆಗಳ ಒಡೆಯರ ಹಿಡಿತಕ್ಕೆ ಸಿಲುಕಿದೆ. ಮಂಗಳೂರನ್ನು ಅತ್ಯುತ್ತಮ ಚಿಕಿತ್ಸೆ ದೊರಕುವ ಆಸ್ಪತ್ರೆಗಳ ನಗರ ಎಂದು ಇಲ್ಲಿನ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕೊಂಡಾಡುತ್ತವೆ. ವಾಸ್ತವದಲ್ಲಿ ಮಂಗಳೂರಿನ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳ ಪಾಲಿಗೆ ನರಕವಾಗಿದೆ, ಬಹುತೇಕ ಸುಲಿಗೆಯ ಕೇಂದ್ರವಾಗಿವೆ ಎಂದು ಆಪಾದಿಸಿದರು.

ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲಾಗದೆ ಬಹುತೇಕ ಕುಟುಂಬಗಳು ಬಡತನದ ಬೇಗೆಗೆ ಸಿಲುಕಿದೆ, ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಎತ್ತುವ ದಯನೀಯ ಸ್ಥಿತಿಯನ್ನು ಕಾಣುತ್ತಿದ್ದೇವೆ. ಇಂತಹ ಲಾಭಕೋರ ಖಾಸಗಿ ಆರೋಗ್ಯ ಲಾಬಿಗಳಿಗೆ ಸರಕಾರಿ ಆಸ್ಪತ್ರೆಗಳ ಹಸ್ತಾಂತರ ಬಡಜನರ ಪಾಲಿಗೆ ಆರೋಗ್ಯದ ಹಕ್ಕಿನ ಪೂರ್ಣ ನಿರಾಕರಣೆ ಆಗಲಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಪೂರ್ಣ ಪ್ರಮಾಣದ ಖಾಸಗೀಕರಣಕ್ಕೆ ತೆರದಿಡಲಿದೆ. ಬಡ ರೋಗಿಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ವೈದ್ಯ ವಿದ್ಯಾರ್ಥಿಗಳ ಕಲಿಕೆಯ ಸಾಧನವಾಗಿ ಮಾರ್ಪಡಿಸಲಿದೆ. ಅತ್ಯಂತ ಪ್ರತಿಗಾಮಿಯಾದ ಈ ತೀರ್ಮಾನವನ್ನು ಹಿಂಪಡೆಯದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ವಿಸ್ತರಣೆಗೊಳ್ಳಲಿದೆ. ಆರೋಗ್ಯ ಸಚಿವರು ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ರಸ್ತೆಯಲ್ಲಿ ತಡೆದು ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಒಪ್ಪಂದದಲ್ಲಿ ಬಿಜೆಪಿ ಶಾಮೀಲು:

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, “ಆರೋಗ್ಯ ಕ್ಷೇತ್ರದ ಖಾಸಗೀಕರಣ ಯಾವುದೇ ಕಾರಣಕ್ಕೂ ಒಪ್ಪಲಾಗದು. ಕಾಂಗ್ರೆಸ್ ಸರಕಾರದ ಈ ತೀರ್ಮಾನವನ್ನು ವಿರೋಧ ಪಕ್ಷ ಬಿಜೆಪಿಯ ಶಾಸಕರು ಪ್ರಶ್ನಿಸದಿರುವುದು, ಬಿಜೆಪಿಯು ಈ ಒಪ್ಪಂದದಲ್ಲಿ ಶಾಮೀಲಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.

ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಒಡೆಯರ ಪರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತವೆ. ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಕುರಿತಾಗಿ ಬಿಜೆಪಿಯ ಮೌನ ಈ ಅಂಶವನ್ನು ಅನುಮಾನ ಇಲ್ಲದಂತೆ ಸಾಬೀತುಪಡಿಸಿದೆ. ಸಿಪಿಎಂ ಈ ಆದೇಶ ರದ್ದಾಗುವವರೆಗೂ ವಿರಮಿಸುವುದಿಲ್ಲ. ಕಾಂಗ್ರೆಸ್, ಬಿಜೆಪಿಗಳ ಶಾಮೀಲಾತಿಯನ್ನು ಬಯಲುಗೊಳಿಸಲಾಗುವುದು” ಎಂದು ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೃಷ್ಣಪ್ಪ ಕೊಂಚಾಡಿ, ಬಿ.ಎಂ.ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಸದಾಶಿವ ದಾಸ್ ವಂದಿಸಿದರು.

- Advertisement -

Related news

error: Content is protected !!