


ರಿಯಾದ್: ಸೌದಿ ಅರೇಬಿಯದ ತಾಯಿಫ್-ರಾನಿಯಾ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಲಯಾಳಿ ನರ್ಸ್‌ಗಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ಮೃತರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಅಯರ್ಕುನ್ನಂನ ಜೈಸಿ ಮೋಲ್ ಮ್ಯಾಥ್ಯ (36) ಮತ್ತು ಕುರುಮಲ್ಲೂರ್‌ನ ಜೋಬಿನಾ ಜಾನಿ (26), ತಮಿಳುನಾಡಿನ ವಿಜಯಲಕ್ಷ್ಮಿ (36) ಮತ್ತು ಹೆಪ್ಪಿಬಾ (33) ಹಾಗೂ ಕಾರು ಚಲಾಯಿಸುತ್ತಿದ್ದ ಸೌದಿ ಪ್ರಜೆ ಎಂದು ಗುರುತಿಸಲಾಗಿದೆ.ಮೃತ ನಾಲ್ವರು ಮಹಿಳೆಯರೂ ತಾಯಿಫ್ ಗವರ್ನರೇಟ್ ನ ಅಲ್ ಘಫಾ ಮತ್ತು ಅಲ್ ಅವೈಲ್ ಕ್ಲಿನಿಕ್ ಗಳಲ್ಲಿ ಸಹೋದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು. ರಜಾ ದಿನದಂದು ಶಾಪಿಂಗ್ ಗೆ ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿದೆ.ತಾಯಿಫ್-ರಾನಿಯಾ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಕಾರಿನಲ್ಲಿದ್ದ ಐವರೂ ಮೃತಪಟ್ಟಿದ್ದಾರೆ.ಮೃತದೇಹಗಳನ್ನು ಸದ್ಯ ರಾನಿಯಾ ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹಗಳನ್ನು ಅವರ ಸ್ವಗ್ರಾಮಗಳಿಗೆ ರವಾನಿಸಲಾಗುವುದು ಎಂದು ತಿಳಿದು ಬಂದಿದೆ.








