




ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ಕರ್ನಾಟಕ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೇಳಿಂಜ ಇವರ ಸಹಯೋಗದಲ್ಲಿ ಸೆ.15ರಂದು ಕೇಳಿಂಜ ಶ್ರೀನಿಕೇತನ ಸಭಾಭವನದಲ್ಲಿ ಸಾಮೂಹಿಕ ಯೋಗ ಗಣಪತಿ ನಮಸ್ಕಾರ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿ ಕೇಳಿಂಜ ಅಧ್ಯಕ್ಷ ಸಂತೋಷ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ, ಯೋಗಬಂಧುಗಳಿಗೆ ಶುಭ ಹಾರೈಸಿದರು. ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ್, ಉತ್ಸವ ಸಮಿತಿ ಅಧ್ಯಕ್ಷ ಸಂದೀಪ್, ವಿಟ್ಲ ನಗರ ಸಂಚಾಲಕ ಪ್ರಕಾಶ ಅಣ್ಣಡ್ಕ, ಸಹಶಿಕ್ಷಣ ಪ್ರಮುಖರಾದ ಗೀತಾ, ಭಜನಾ ಪ್ರಮುಖರಾದ ವೃಂದ ಹಾಗೂ ಕಾರ್ಯಕ್ರಮದ ಸಂಚಾಲಕ ಕೇಶವ ಉಪಸ್ಥಿತರಿದ್ದರು.
ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ 328ಕ್ಕೂ ಹೆಚ್ಚು ಯೋಗಬಂಧುಗಳು ಭಾಗವಹಿಸಿ ಯೋಗದ ಮೂಲಕ ಶ್ರೀ ಮಹಾಗಣಪತಿಗೆ ಸಾಮೂಹಿಕ ನಮಸ್ಕಾರ ಸಲ್ಲಿಸಿದರು.
ಚೌತಿ ಆಚರಣೆಯ ಮಹತ್ವ ಹಾಗೂ ಉದ್ದೇಶದ ಕುರಿತು ರಾಜಾರಾಮಣ್ಣ ವಿಶೇಷ ಬೌದ್ಧಿಕ್ ನಡೆಸಿಕೊಟ್ಟರು. ಯೋಗಾಭ್ಯಾಸದ ಬಳಿಕ ಯೋಗಬಂಧುಗಳು ಶ್ರೀ ಗಣಪತಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಬಂಧುಗಳಿಗೆ ಗಣೇಶೋತ್ಸವ ಸಮಿತಿ ಕೇಳಿಂಜ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಕೇಳಿಂಜ ಶಾಖೆಯ ಕುಸುಮ ನೆರವೇರಿಸಿದರೆ, ಕಾರ್ಯಕ್ರಮದ ಸಂಚಾಲಕ ಕೇಶವ ವಂದನಾರ್ಪಣೆ ಮಾಡಿದರು. ಜಿಲ್ಲಾ ಸಹ ಸಂಚಾಲಕರು ಹಾಗೂ ಸಮಿತಿಯ ವಿವಿಧ ಪ್ರಮುಖರು ಭಾಗವಹಿಸಿದ್ದರು.








