
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.

ಪ್ರಕಾಶ್ ರಾಜ್ ಈ ಕುರಿತು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ಕ್ಷೇತ್ರದಲ್ಲಿ ಹುಟ್ಟಿ, ವಿದ್ಯಾಭ್ಯಾಸ ಮಾಡಿ ಮತ್ತು ಬೆಳೆದರೂ, ಲಕ್ಷಾಂತರ ಇತರ ನಾಗರಿಕರ ಜೊತೆಗೆ ನನ್ನ ಹೆಸರನ್ನು ಸದ್ದಿಲ್ಲದೆ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.ಸ್ನೇಹಿತರೇ, ನಿಮಗೆ ಒಂದು ಜೋಕ್ ಹೇಳಬೇಕು, ಎಸ್ ಐಆರ್ ನಂತರ ಬೆಂಗಳೂರಿನಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬ ಇದು ಒಳ್ಳೆಯ ಹಾಸ್ಯ ಅಲ್ಲವೇ? ನಾನು ಹುಟ್ಟಿದ್ದು ಇದೇ ಕ್ಷೇತ್ರದಲ್ಲಿ ಇಲ್ಲೇ ವಾಸಿಸಿದ್ದೇನೆ, ಇಲ್ಲೇ ಶಾಲೆ, ಕಾಲೇಜಿಗೆ ತೆರಳಿದ್ದೇನೆ ಮತ್ತು ರಂಗಭೂಮಿ ಜೀವನ ನಡೆಸಿದ್ದೇನೆ. ನಿಮ್ಮ ಮಾಹಿತಿಗಾಗಿ, ನಾನು ಇದೇ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯೂ ಆಗಿದ್ದೆ” ಎಂದು ಪ್ರಕಾಶ್ ರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.ಈ ನಡುವೆ, ಜಾರ್ಖಂಡ್ ವಿಧಾನಸಭೆಯ ಸಮೀಪ ಪ್ರತಿಭಟನೆ ನಡೆಸುತ್ತಿದ್ದ JPSC-JSSC ಪರೀಕ್ಷಾ ಆಕಾಂಕ್ಷಿಗಳ ವಿರುದ್ಧ ಅಶ್ರುವಾಯು ಪ್ರಯೋಗ ಹಾಗೂ ಲಾಠಿಚಾರ್ಜ್ ನಡೆಸಿದ್ದನ್ನು ಪ್ರಕಾಶ್ ರಾಜ್ ಖಂಡಿಸಿದ್ದಾರೆ.

ಪ್ರತಿಭಟನಾ ಸ್ಥಳದ್ದು ಎನ್ನಲಾದ ವಿಡಿಯೋವೊಂದನ್ನು ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯು ಪ್ರಯೋಗ ಹಾಗೂ ಲಾಠಿಚಾರ್ಜ್ ನಡೆಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಈ ರೀತಿಯ ದೌರ್ಜನ್ಯ ಯಾಕೆ? ಈ ದೌರ್ಜನ್ಯ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.









