
ಮಂಗಳೂರು: ದೈವಸ್ಥಾನದ ಬಾಗಿಲು ಹಾಗೂ ಕಿಟಕಿಯನ್ನು ಮುರಿದು ಒಳನುಗ್ಗಿ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು ₹15 ಸಾವಿರ ನಗದು ಕಳವು ಮಾಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.


ಆಗಸ್ಟ್ 5ರಂದು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಸುರತ್ಕಲ್ ಮಧ್ಯ ಕೊಡಿಪಾಡಿಯಲ್ಲಿರುವ ಕೋರ್ದಗಬ್ಬು ದೈವಸ್ಥಾನಕ್ಕೆ ನುಗ್ಗಿದ ಕಳ್ಳ, ಕಬ್ಬಿಣದ ಆಯುಧ ಬಳಸಿ ಬಾಗಿಲು ಮತ್ತು ಕಿಟಕಿಯನ್ನು ಮುರಿದು ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದನು. ಹುಂಡಿಯಲ್ಲಿದ್ದ ಸುಮಾರು ₹15 ಸಾವಿರ ನಗದು ಕಳವಾಗಿತ್ತು.ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಆಗಸ್ಟ್ 10ರಂದು ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಉಡುಪಿ ತಾಲೂಕಿನ ಕುಕ್ಕಿಕಟ್ಟೆ ನಿವಾಸಿ ಸುಖೇಶ್ ನಾಯ್ಕ್ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ.ಆರೋಪಿಯನ್ನು ಆಗಸ್ಟ್ 11ರಂದು ಮಂಗಳೂರು ನಗರದ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ತನಿಖೆಯಲ್ಲಿ ಆರೋಪಿಯ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ಹಾಗೂ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ತಿಳಿದುಬಂದಿದೆ. ಅಲ್ಲದೆ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್‌ಗಳಿರುವುದೂ ಪತ್ತೆಯಾಗಿದೆ.








