Friday, June 5, 2026
spot_imgspot_img
spot_imgspot_img

ಕೋರ್ಟ್ ಆವರಣದಲ್ಲಿ ವಾಮಾಚಾರದ ಭೀತಿ; ಮಹಿಳೆಗೆ ₹5 ಸಾವಿರ ದಂಡ

- Advertisement -
- Advertisement -

ಹಾಸನ : ನ್ಯಾಯಾಲಯದ ಮುಂಭಾಗದಲ್ಲೇ ನಿಂಬೆಹಣ್ಣು ಮಂತ್ರಿಸಿ, ಕಾಯಿ ಒಡೆದು ವಾಮಾಚಾರದ ಭೀತಿ ಹುಟ್ಟಿಸಿದ ಮಹಿಳೆಗೆ ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭಾರಿ ದಂಡ ವಿಧಿಸಿದೆ.

ಪ್ರಕರಣವೊಂದರ ಆರೋಪಿಯಾಗಿದ್ದ ಚಂದ್ರಿಕಾ ಎಂಬಾಕೆಯೇ ನ್ಯಾಯಾಧೀಶರಿಂದ ಶಿಕ್ಷೆಗೆ ಒಳಗಾದ ಮಹಿಳೆ.ಜೂನ್ 4 ರಂದು ಬೆಳಗಿನ ಜಾವ ಸುಮಾರು 8:30ರ ವೇಳೆಗೆ ಚಂದ್ರಿಕಾ ನ್ಯಾಯಾಲಯದ ಮುಂಭಾಗದಲ್ಲಿ ನಿಂಬೆಹಣ್ಣು ಇಟ್ಟು, ಮಂತ್ರಿಸಿ, ಕಾಯಿ ಒಡೆಯುತ್ತಿದ್ದಳು. ಇದನ್ನು ಕಂಡ ಸಾರ್ವಜನಿಕರು ಹಾಗೂ ಅಲ್ಲಿ ನೆರೆದಿದ್ದವರು ವಾಮಾಚಾರ ಇರಬಹುದೆಂದು ತೀವ್ರ ಆತಂಕಗೊಂಡಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ನ್ಯಾಯಾಲಯದ ಕಾವಲು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.ನ್ಯಾಯಾಲಯದ ಕಾವಲು ಪೊಲೀಸರು ಮಹಿಳೆಯನ್ನು ಹಾಜರುಪಡಿಸಿದಾಗ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅವರು ವಿಚಾರಣೆ ನಡೆಸಿದರು.

ಈ ವೇಳೆ ಆರೋಪಿ ಮಹಿಳೆ ತಾನು ಮನೆದೇವರ ಪೂಜೆ ಮಾಡುತ್ತಿರುವುದಾಗಿ ಹಾರಿಕೆ ಉತ್ತರ ನೀಡಿದ್ದಾಳೆ. ಮಹಿಳೆಯ ನಡವಳಿಕೆಯಿಂದ ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಮತ್ತು ಆತಂಕ ಸೃಷ್ಟಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಮುಂದಿನ ದಿನಗಳಲ್ಲಿ ಇಂತಹ ಸಾರ್ವಜನಿಕ ಆತಂಕಕ್ಕೆ ಕಾರಣವಾಗಬಾರದು ಎಂದು ಎಚ್ಚರಿಸಿದರು.

ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಕಾರಣಕ್ಕಾಗಿ ಆರೋಪಿ ಚಂದ್ರಿಕಾಗೆ 5,000 ರೂ.ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಎರಡು ದಿನಗಳ ಕಾಲ ಸಾದಾ ಸಜೆ (ಜೈಲು ಶಿಕ್ಷೆ) ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

- Advertisement -

Related news

error: Content is protected !!