

ಪುತ್ತೂರು: ಬೆಂಗಳೂರಿನ ಫೌಂಡೇಶನ್ ಒಂದರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಮನೆಗೆ ತೆರಳಿ ಮಕ್ಕಳನ್ನು ಕೊಡಿಸುವುದಾಗಿ ಹೇಳಿ ಹಣ ಸಂಗ್ರಹಿಸಲು ಯತ್ನಿಸಿದ ಯುವಕನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಕೊಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮನೆಮನೆಗೆ ತೆರಳಿ ಬೆಂಗಳೂರಿನ ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಕೇಳುತ್ತಿದ್ದ. ಅಲ್ಲದೆ, ಮಕ್ಕಳನ್ನು ಕೊಡಿಸುವುದಾಗಿ ಹೇಳಿ ಹಣ ಸಂಗ್ರಹಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಸ್ಥಳೀಯರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

ವಿಚಾರಣೆ ವೇಳೆ ಆತ ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಣೇಶ್ (24) ಎಂದು ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿ ದೂರುದಾರರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಗಣೇಶ್ ವಿರುದ್ಧ ಕರ್ನಾಟಕ ಪೊಲೀಸ್ ಅಧಿನಿಯಮ 1965ರ ಕಲಂ 92ರಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.








