


ಮಂಡ್ಯ: ಕನ್ನಡ ಉತ್ಸವದ ವೇದಿಕೆಯಲ್ಲಿ ನಟ ದರ್ಶನ್ ಅಭಿಮಾನಿಗಳು ಕೂಗಿದ ‘ಜೈ ಡಿ ಬಾಸ್’ ಘೋಷಣೆ ರಾಜಕೀಯ ವೇದಿಕೆಯಲ್ಲೇ ಗದ್ದಲಕ್ಕೆ ಕಾರಣವಾದ ಘಟನೆ ಮಂಡ್ಯ ಜಿಲ್ಲೆಯ ಬಸರಾಳಿನಲ್ಲಿ ನಡೆದಿದೆ. ಶಾಸಕ ರವಿಕುಮಾರ್ ಗಣಿಗ ಅವರು ಭಾಷಣ ಮಾಡುತ್ತಿದ್ದ ವೇಳೆ ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ್ದು, ಇದರಿಂದ ಅಸಮಾಧಾನಗೊಂಡ ಶಾಸಕರು ವೇದಿಕೆಯ ಮೇಲಿಂದಲೇ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರ ಖಡಕ್ ಪ್ರತಿಕ್ರಿಯೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.ಬಸರಾಳಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ಉತ್ಸವಕ್ಕೆ ಸ್ಥಳೀಯ ಶಾಸಕ ರವಿಕುಮಾರ್ ಗಣಿಗ, ನಟ ಧ್ರುವ ಸರ್ಜಾ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ನೆರೆದಿದ್ದ ಕೆಲವರು ನಟ ದರ್ಶನ್ ಪರವಾಗಿ ‘ಜೈ ಡಿ ಬಾಸ್’, ‘ಡಿ ಬಾಸ್’ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.ಭಾಷಣದ ಮಧ್ಯೆ ನಿರಂತರವಾಗಿ ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡ ಶಾಸಕ ರವಿಕುಮಾರ್ ಗಣಿಗ, ಅಭಿಮಾನಿಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಯಾವುದೋ ಅದು ಡಿ ಬಾಸ್, ಮುಚ್ಚೋ ಬಾಯಿ’ ಎಂದು ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ಘೋಷಣೆ ಕೂಗುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅಭಿಮಾನಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಘೋಷಣೆ ಕೂಗುವ ವಿಚಾರ ಈ ಹಿಂದೆಯೂ ಹಲವು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ದರ್ಶನ್ ಅಭಿಮಾನಿಗಳ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು. ಇದೀಗ ಬಸರಾಳು ಕನ್ನಡ ಉತ್ಸವದಲ್ಲಿ ನಡೆದ ಘಟನೆ ಮತ್ತೊಮ್ಮೆ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲವರು ಶಾಸಕರ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಸಾರ್ವಜನಿಕ ವೇದಿಕೆಯಲ್ಲಿ ಅವರು ಬಳಸಿದ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳ ಘೋಷಣೆ ಹಾಗೂ ಅದಕ್ಕೆ ಶಾಸಕ ರವಿಕುಮಾರ್ ಗಣಿಗ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದೀಗ ರಾಜಕೀಯ ಮತ್ತು ಚಿತ್ರರಂಗದ ಅಭಿಮಾನಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.







