


ಲಖನೌ: ಟ್ರಕ್‌ಗೆ ಓಮ್ನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಕುಶಿನಗರ ಜಿಲ್ಲೆಯ ಹಟಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಥರುವಾಡಿಹ್ ಬಳಿ ಈ ಅಪಘಾತ ಸಂಭವಿಸಿದೆ. ಎಂಟು ಮಂದಿ ಪ್ರಯಾಣಿಸುತ್ತಿದ್ದ ಓಮ್ನಿ ವ್ಯಾನ್ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗೋರಖ್‌ಪುರ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಮೃತರ ಪೈಕಿ ಐವರು ಒಂದೇ ಕುಟುಂಬದವರಾಗಿದ್ದು, ಕಪ್ತಾನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಭಲುಹಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸಂಬಂಧಿಕರ ಮನೆಯಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಓಮ್ನಿ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದೊಳಗೆ ಸಿಲುಕಿದ್ದ ಮೃತದೇಹಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಮೃತರನ್ನು ಕನ್ಹಯ್ಯ ಪ್ರಸಾದ್ (40), ರಾಮ್‌ವಿಲಾಸ್ (65), ರಾಮ್ ಮಿಲನ್ (35), ಮೃದಲ್ ಮಿಶ್ರಾ (35), ರಂಜಯ್ ಗುಪ್ತಾ (32) ಮತ್ತು ಮಿಥಿಲೇಶ್ ಗುಪ್ತಾ (22) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.








