Friday, November 6, 2026
spot_imgspot_img
spot_imgspot_img

ಗೃಹಲಕ್ಷ್ಮಿ ಸಹಾಯಧನ ಫಲಾನುಭವಿಗಳ ಹಕ್ಕಲ್ಲ; ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಿಡುಗಡೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಮಾಸಿಕ 2 ಸಾವಿರ ರೂ. ಸಹಾಯಧನವನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ಯೋಜನೆಯ ಅನುಷ್ಠಾನವು ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಆಡಳಿತಾತ್ಮಕ ಅನಿವಾರ್ಯತೆಗಳಿಗೆ ಒಳಪಟ್ಟಿರುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ತಲಾ 2 ಸಾವಿರ ರೂ. ಸಹಾಯಧನದ ಒಟ್ಟು 5 ಸಾವಿರ ಕೋಟಿ ರೂ. ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಆರ್. ಗಂಗಾ ಹಾಗೂ ಜಿ.ಡಿ. ಪವಿತ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ಗುರುವಾರ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವಕೇಟ್ ಜನರಲ್ ತಾರಾನಾಥ್ ಪೂಜಾರಿ ಅವರು ಸರ್ಕಾರದ ಆಕ್ಷೇಪಣಾ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ನೆರವು ನೀಡಲು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಕಲ್ಯಾಣ ಯೋಜನೆಯೊಂದರ ಅಸ್ತಿತ್ವ ಮಾತ್ರದಿಂದ ಫಲಾನುಭವಿಗಳಿಗೆ ಆರ್ಥಿಕ ನೆರವು ಪಡೆಯುವ ನಿರಾಕರಿಸಲಾಗದ ಕಾನೂನುಬದ್ಧ ಹಕ್ಕು ದೊರೆಯುವುದಿಲ್ಲ. ನ್ಯಾಯಾಂಗ ಮಧ್ಯಪ್ರವೇಶದ ಮೂಲಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿದೆ.ರಾಜ್ಯವು ನೈಜ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ‘ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ’ದ ಆಧಾರದಲ್ಲಿ ಸಹಾಯಧನ ಬಿಡುಗಡೆಗೆ ಒತ್ತಾಯಿಸುವಂತಿಲ್ಲ. ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅಗತ್ಯತೆಗಳು ಮತ್ತು ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸಹಾಯಧನವನ್ನು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿಲ್ಲ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ.

ಈ ಎರಡು ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದ್ದರೂ, ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಅರ್ಜಿಯು ಕಾನೂನಿನ ದೃಷ್ಟಿಯಿಂದ ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಪೀಠವನ್ನು ಕೋರಿದೆ. ಸರ್ಕಾರದ ಆಕ್ಷೇಪಣೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.

- Advertisement -

Related news

error: Content is protected !!