
ದಾವಣಗೆರೆ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಎಸಗಿದ ಆರೋಪದಡಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಕೊ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.ಪ್ರಕರಣ ದಾಖಲಾದ ತಿಂಗಳಲ್ಲೇ ತನಿಖೆ ಪೂರ್ಣಗೊಂಡಿದ್ದು 100ಕ್ಕೂ ಹೆಚ್ಚು ಪುಟಗಳ ದೋಷಾರೋಪಪಟ್ಟಿ ಜಿಲ್ಲಾ ವಿಶೇಷ ಪೋಕ್ಸ್ ನ್ಯಾಯಾಲಯಕ್ಕೆ ಜೂನ್ 6ರಂದು ಸಲ್ಲಿಕೆಯಾಗಿದೆ. ಸಾಕ್ಷ್ಯಗಳು, ಸಂತ್ರಸ್ತ ಬಾಲಕ, ಆತನ ಸಹಪಾಠಿಗಳು ಸೇರಿದಂತೆ ಹಲವರ ಹೇಳಿಕೆ ಕೂಡ ದೋಷಾರೋಪಪಟ್ಟಿಯಲ್ಲಿದೆ.
ವಸತಿನಿಲಯದ ಬಾಲಕರನ್ನು ದುರ್ಬಳಕೆ ಮಾಡಿಕೊಂಡು ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲೂಸಿ) ಸಿದ್ಧಪಡಿಸಿದ ವರದಿ ದೋಷಾರೋಪಪಟ್ಟಿಯಲ್ಲಿದೆ. ಕೆಲ ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಮಾತ್ರ ಬಾಕಿ ಇವೆ ಎಂದು ಮೂಲಗಳು ಮಾಹಿತಿ ನೀಡಿವೆ.ಮಾಹಿತಿ ನೀಡಿವೆ.16 ವರ್ಷದ ಸಂತ್ರಸ್ತ ಬಾಲಕನ ತಾಯಿಯೊಬ್ಬರು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಠಾಣೆಯಲ್ಲಿ ಮೇ 5ರಂದು ವಚನಾನಂದ ಸ್ವಾಮೀಜಿ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದರು.
ಕೃತ್ಯ ನಡೆದ ಸ್ಥಳದ ವ್ಯಾಪ್ತಿಯ ಹರಿಹರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದಿದ್ದ ಸ್ವಾಮೀಜಿಯನ್ನು ಠಾಣೆಗೆ ಕರೆಸಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿದ್ದರು.








