Wednesday, October 28, 2026
spot_imgspot_img
spot_imgspot_img

ಸುರತ್ಕಲ್: ಪೊಲೀಸ್ ದೌರ್ಜನ್ಯದ ಆರೋಪ: ಹೊಸಬೆಟ್ಟುವಿನಲ್ಲಿ ವ್ಯಕ್ತಿ ಆತ್ಮಹತ್ಯೆ-ಮೃತದೇಹವಿಟ್ಟು ಗ್ರಾಮಸ್ಥರ ಪ್ರತಿಭಟನೆ; ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ

- Advertisement -
- Advertisement -



ಸುರತ್ಕಲ್: ಹೊಸಬೆಟ್ಟು ನಿವಾಸಿ ಸೋಮನಾಥ (45) ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಹೊಸಬೆಟ್ಟು ಜಟ್ಟಿ ಸಮೀಪ ನಡೆದಿದೆ. ಸೋಮನಾಥ ಅವರ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಮೃತದೇಹವಿದ್ದ ಆ್ಯಂಬುಲೆನ್ಸ್ ಅನ್ನು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.


ಗಿರೀಶ್ ಎಂಬವರು ಸೋಮನಾಥ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ, ಅವರ ಅಕ್ಕನ ಪತಿ ಹಾಗೂ ಗುಡ್ಡಕೊಪ್ಪ ನಿವಾಸಿ ನೀಲಾದರ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ನೀಲಾದರ ಅವರು ಸೋಮನಾಥ ಅವರ ಮನೆಗೆ ತೆರಳಿ ಪರಿಶೀಲಿಸಿದಾಗ, ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮನಾಥ ಅವರು ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಹೊಸಬೆಟ್ಟುವಿನಲ್ಲಿ ವಾಸವಾಗಿದ್ದರು. ಅವರು ಪತ್ನಿ ಹಾಗೂ ಏಳು ವರ್ಷದ ಪುತ್ರನನ್ನು ಅಗಲಿದ್ದಾರೆ.


ಯುವತಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ
ಅಕ್ಟೋಬರ್ 25ರಂದು ರಾತ್ರಿ ಸುಮಾರು 11.30ರ ವೇಳೆಗೆ ಕುಳಾಯಿ ಮೀನುಗಾರಿಕಾ ಜಟ್ಟಿ ಬಳಿ ಸೋಮನಾಥ ಅವರು ಸ್ನೇಹಿತರೊಂದಿಗೆ ಇದ್ದರು ಎನ್ನಲಾಗಿದೆ. ಈ ವೇಳೆ ದಿಲ್ಲಿ ಮೂಲದ ಯುವತಿ ಮತ್ತು ಕೇರಳ ಮೂಲದ ಯುವಕ ಅಲ್ಲಿರುವುದನ್ನು ಗಮನಿಸಿದ ಸೋಮನಾಥ ಹಾಗೂ ಇತರರು ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.


ಈ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಸೋಮನಾಥ ಅವರನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದಿದ್ದರು ಎನ್ನಲಾಗಿದೆ. ಅವರ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿ, ವೀಡಿಯೊ ಚಿತ್ರೀಕರಣದೊಂದಿಗೆ ವಿಚಾರಣೆ ನಡೆಸಿದ ಬಳಿಕ ಮನೆಗೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಮತ್ತೆ ಠಾಣೆಗೆ ಕರೆಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ತಡರಾತ್ರಿ ಮನೆಗೆ ಕಳುಹಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಈ ವಿಚಾರದಿಂದ ಸೋಮನಾಥ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.


ಮೃತದೇಹವಿಟ್ಟು ಪ್ರತಿಭಟನೆ
ಸೋಮನಾಥ ಅವರ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಮೃತದೇಹವಿದ್ದ ಆ್ಯಂಬುಲೆನ್ಸ್ ಅನ್ನು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು.


ಸ್ಥಳಕ್ಕೆ ಆಗಮಿಸಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ, ಪಣಂಬೂರು ಉಪವಿಭಾಗದ ಎಸಿಪಿ, ಪಣಂಬೂರು ಪೊಲೀಸ್ ನಿರೀಕ್ಷಕ ಹಾಗೂ ಸುರತ್ಕಲ್ ಪೊಲೀಸ್ ನಿರೀಕ್ಷಕರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.


ಯುವತಿ ಮತ್ತು ಆಕೆಯ ಗೆಳೆಯನ ವಿರುದ್ಧ ಕ್ರಮ ಕೈಗೊಳ್ಳುವುದು, ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು ಹಾಗೂ ಹೊಸಬೆಟ್ಟು ಗ್ರಾಮಸ್ಥರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕ್ರಮ ವಹಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಅಧಿಕಾರಿಗಳು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು ಎಂದು ತಿಳಿದುಬಂದಿದೆ.


ದೂರು ನೀಡಿದರೆ ಪ್ರಕರಣ ದಾಖಲು: ಪೊಲೀಸ್ ಆಯುಕ್ತರು


ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, “ಸೋಮನಾಥ ಅವರ ಸಾವಿಗೆ ಮಹಿಳೆ ಮತ್ತು ಆಕೆಯ ಗೆಳೆಯ ಕಾರಣವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಸಂಬಂಧ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲಾಯಿತು. ಬಳಿಕ ಅವರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು” ಎಂದು ತಿಳಿಸಿದ್ದಾರೆ.


ಸೋಮನಾಥ ಅವರ ಸಾವಿನ ಕುರಿತು ಗ್ರಾಮಸ್ಥರು ಪೊಲೀಸರ ವಿರುದ್ಧ ಮಾಡಿರುವ ಆರೋಪಗಳು ಹಾಗೂ ಘಟನೆಯ ಹಿಂದಿನ ನೈಜ ಕಾರಣಗಳ ಬಗ್ಗೆ ಸೂಕ್ತ ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ.

- Advertisement -

Related news

error: Content is protected !!