Tuesday, June 16, 2026
spot_imgspot_img
spot_imgspot_img

ಒಪ್ಪಿಗೆಯಿಲ್ಲದೆ ಖಾಸಗಿ ಫೋಟೊ-ವೀಡಿಯೊ ಪ್ರಸಾರ ಮಾಡಿದರೆ ಕಠಿಣ ಕ್ರಮ: ತಕ್ಷಣ FIR ದಾಖಲಿಸಲು ಪೊಲೀಸ್ ಇಲಾಖೆಯ ಸೂಚನೆ

- Advertisement -
- Advertisement -

ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಫೋಟೊಗಳು ಅಥವಾ ವೀಡಿಯೊಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ಕಡ್ಡಾಯವಾಗಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ದೂರುಗಳನ್ನು ದಾಖಲಿಸುವಲ್ಲಿ ವಿಳಂಬವಾಗುತ್ತಿರುವುದು ಹಾಗೂ ಕೆಲವೆಡೆ ದೂರು ಸ್ವೀಕರಿಸಲು ನಿರಾಕರಿಸಲಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಒಬ್ಬ ವ್ಯಕ್ತಿ ಫೋಟೊ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನು ಇತರರಿಗೆ ಹಂಚಲು ಅಥವಾ ಸಾರ್ವಜನಿಕವಾಗಿ ಪ್ರಸಾರ ಮಾಡಲು ಪ್ರತ್ಯೇಕ ಒಪ್ಪಿಗೆ ಅಗತ್ಯವಾಗಿದ್ದು, ಅದಿಲ್ಲದೆ ಪ್ರಸಾರ ಮಾಡಿದರೆ ಅದು ಅಪರಾಧವಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಮಾರ್ಗಸೂಚಿಯ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮಹಿಳೆಯರು ಸಂತ್ರಸ್ತರಾಗಿರುವ ಪ್ರಕರಣಗಳಲ್ಲಿ ಈ ವಿಧಿಗಳಡಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ.ಅನುಮತಿಯಿಲ್ಲದೆ ಖಾಸಗಿ ಅಥವಾ ಆಪ್ತ ಫೋಟೊ-ವೀಡಿಯೊಗಳ ಪ್ರಸಾರ, ಬೆದರಿಕೆ ಹಾಕುವ ಉದ್ದೇಶದ ವೀಡಿಯೊ ಹಂಚಿಕೆ, ‘ಸೆಕ್ಸ್‌ಟೋರ್ಷನ್’ ಹಾಗೂ ‘ರಿವೆಂಜ್ ಪೋರ್ನೋಗ್ರಫಿ’ ಪ್ರಕರಣಗಳಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಉಲ್ಲೇಖಿಸಿ ದೂರು ನಿರಾಕರಿಸಬಾರದು ಎಂದು ಇಲಾಖೆ ತಿಳಿಸಿದೆ.ಅಪರಾಧ ಸ್ಥಳ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದರೆ ‘ಝೀರೋ ಎಫ್‌ಐಆರ್’ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು. ಜೊತೆಗೆ ಸಾಮಾಜಿಕ ಜಾಲತಾಣಗಳು ಹಾಗೂ ಸಂಬಂಧಿತ ಡಿಜಿಟಲ್ ವೇದಿಕೆಗಳಿಗೆ ನೋಟಿಸ್ ನೀಡಿ ಆಕ್ಷೇಪಾರ್ಹ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸುವುದು, ಸಂತ್ರಸ್ತರ ಗುರುತನ್ನು ಗೌಪ್ಯವಾಗಿಡುವುದು ಹಾಗೂ ಮಹಿಳಾ ಸಂತ್ರಸ್ತೆಯರ ದೂರುಗಳನ್ನು ಮಹಿಳಾ ಅಧಿಕಾರಿಗಳ ಮೂಲಕ ದಾಖಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಇಂತಹ ಪ್ರಕರಣಗಳ ತನಿಖೆಯಲ್ಲಿ ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು.

ಪ್ರಕರಣ ದಾಖಲಿಸಲು ವಿಳಂಬ ಮಾಡುವುದು ಅಥವಾ ‘ಪೂರ್ವಾನುಮತಿ ಇತ್ತು’ ಎಂಬ ಕಾರಣ ನೀಡಿ ದೂರು ಸ್ವೀಕರಿಸಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!