
ಮಹಾರಾಷ್ಟ್ರ: ಥಾಣೆ ಜಿಲ್ಲೆಯ ಡೊಂಬಿವಿಯ ಶಾಸ್ತ್ರಿ ನಗರ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಹಾಗೂ ಅವರ ಬೆಂಬಲಿಗರ ಹಲ್ಲೆಯ ಬಳಿಕ, ಹಲ್ಲೆಗೆ ಒಳಗಾದ ವೈದ್ಯರಲ್ಲಿ ಒಬ್ಬರು ಭಯದಿಂದ ರಾಜೀನಾಮೆ ನೀಡಿ ನಗರ ತೊರೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯ, “ನಾನು ರಾಜೀನಾಮೆ ನೀಡಿದ್ದೇನೆ. ತುಂಬಾ ಭಯವಾಗಿದೆ. ಗೂಂಡಾಗಳು ನಮ್ಮ ಮೇಲೆ ನಿಗಾ ಇಟ್ಟಿದ್ದಾರೆ. ನಾನು ಈಗಾಗಲೇ ನಗರ ತೊರೆದಿದ್ದೇನೆ. ಮತ್ತೆ ಎಂದಿಗೂ ಅಲ್ಲಿಗೆ ಹಿಂತಿರುಗುವುದಿಲ್ಲ” ಎಂದು ಹೇಳಿದ್ದಾರೆ.ಜುಲೈ 6ರಂದು ಕಲ್ಯಾಣ್-ಡೊಂಬಿವಿ ಮಹಾನಗರ ಪಾಲಿಕೆ (KDMC) ನಡೆಸುತ್ತಿರುವ ಶಾಸ್ತ್ರಿ ನಗರ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಸಂಪೂರ್ಣ ಭರ್ತಿಯಾಗಿದ್ದರಿಂದ, ಚಿಕಿತ್ಸೆಗಾಗಿ ನವಜಾತ ಶಿಶುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದ್ದರು.

ಇದರಿಂದ ಅಸಮಾಧಾನಗೊಂಡ ಮಗುವಿನ ಸಂಬಂಧಿಕರು ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಅವರನ್ನು ಸಂಪರ್ಕಿಸಿದ್ದರು.ಬಳಿಕ ಆಸ್ಪತ್ರೆಗಾಗಮಿಸಿದ ಮ್ಹಾತ್ರೆ ಹಾಗೂ ಅವರ ಬೆಂಬಲಿಗರು ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದು, ವೈದ್ಯೆಯ ಮೊಬೈಲ್ಗೆ ಹೊಡೆದು ಕೆಳಗೆ ಬೀಳಿಸಿದ ಜೊತೆಗೆ ಇತರ ವೈದ್ಯರು ಹಾಗೂ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಹಾಗೂ ವಿಡಿಯೊಗಳಲ್ಲಿ ದಾಖಲಾಗಿದೆ. ಘಟನೆಯಲ್ಲಿ ಒಬ್ಬ ವೈದ್ಯ ಗಾಯಗೊಂಡಿದ್ದಾರೆ.ಆದರೆ, ಆರೋಪಗಳನ್ನು ತಳ್ಳಿಹಾಕಿರುವ ರಮೇಶ್ ಮ್ಹಾತ್ರೆ, “ನಾನು ವೈದ್ಯೆಯ ಮೇಲೆ ಹಲ್ಲೆ ಮಾಡಿಲ್ಲ. ಅವರ ಕೈಯಲ್ಲಿದ್ದ ಮೊಬೈಲ್ಗೆ ಮಾತ್ರ ಹೊಡೆದಿದ್ದೇನೆ. ನಮ್ಮ ಕ್ರಮದಿಂದ ತಾಯಿ ಮತ್ತು ಮಗುವಿನ ಜೀವ ಉಳಿದಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ವೈದ್ಯರು ಕ್ಷಮೆಯಾಚಿಸಿದರೆ ಮಾತ್ರ ವಿಷಾದ ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಮ್ಹಾತ್ರೆ ಹಾಗೂ ಅವರ ಐವರು ಬೆಂಬಲಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಬುಧವಾರ ಸಂಜೆ ಮ್ಹಾತ್ರೆ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.








