
ಪುತ್ತೂರು: ಧಾರವಾಡದ Centre for Multi-Disciplinary Development Research (ಸಿಎಂಡಿಆರ್) ವತಿಯಿಂದ ಭಾರತ ಹಾಗೂ ವಿದೇಶಗಳ ಶಿಕ್ಷಣ ಸಂಸ್ಥೆಗಳಲ್ಲಿನ ಭಾರತೀಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS – Indian Knowledge System) ಪ್ರಬಂಧ ಸ್ಪರ್ಧೆ 2.0ರಲ್ಲಿ ಪುತ್ತೂರು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಹಿಮಾ ಆರ್ ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಅವರು ಬರೆದ ಪ್ರಬಂಧಕ್ಕೆ 71.33 ಅಂಕಗಳು ಲಭಿಸಿದ್ದು, ರೂ. 10,000 ನಗದು ಬಹುಮಾನವನ್ನು ಪಡೆದಿದ್ದಾರೆ. ವಿಶೇಷವೆಂದರೆ, ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧವೂ ಇದೇ ಆಗಿದೆ.ಮಹಿಮಾ ಆರ್ ಕೆ ಅವರು ವಿಟ್ಲ ನಿವಾಸಿಗಳಾದ ರವಿಶಂಕರ ಕುಳಮರ್ವ ಹಾಗೂ ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿದ್ದಾರೆ. ಅವರ ಸಾಧನೆಗೆ ಶಾಲಾ ವಲಯದಲ್ಲಿ ಹಾಗೂ ಸ್ಥಳೀಯ ಸಮುದಾಯದಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.








