

ಚೆನ್ನೈ: ಈಶಾನ್ಯ ಮಾನ್ಸೂನ್ ತನ್ನ ಅತ್ಯಂತ ಸಕ್ರಿಯ ಹಂತಕ್ಕೆ ಪ್ರವೇಶಿಸುತ್ತಿರುವಂತೆ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಹವಾಮಾನ ವ್ಯವಸ್ಥೆಯು ರೂಪುಗೊಳ್ಳುತ್ತಿದೆ. ಪ್ರದೇಶವು ಸತತ ಎರಡು ತೀವ್ರ ಚಂಡಮಾರುತಗಳಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ನಡೆಯುತ್ತಿರುವ ಈ ಅಸಾಮಾನ್ಯ ಬೆಳವಣಿಗೆಯ ಮೇಲೆ ತೀವ್ರ ನಿಗಾ ಅಗತ್ಯವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನವೆಂಬರ್ 13ರ ಸುಮಾರಿಗೆ ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳಲಿದೆ. ಇದು ವಾಯುಭಾರ ಕುಸಿತ ಅಥವಾ ಚಂಡಮಾರುತವಾಗಿ ಬೆಳವಣಿಗೆಯಾದರೆ,

ಈಗಾಗಲೇ ‘ಮುರಾಸು’ ಮತ್ತು ‘ಅರ್ನಬ್’ ಚಂಡಮಾರುತಗಳ ಸೃಷ್ಟಿಯಿಂದ ಗುರುತಿಸಲ್ಪಟ್ಟಿರುವ ಪ್ರಸಕ್ತ ಹಂಗಾಮಿಗೆ ಮತ್ತೊಂದು ಸೇರ್ಪಡೆಯಾಗಲಿದೆ.ಸತತವಾಗಿ ಎರಡು ಚಂಡಮಾರುತಗಳು ಉಂಟಾಗಿದ್ದ ಬೆನ್ನಲ್ಲೇ ಮತ್ತೊಂದು ಚಂಡಮಾರುತ ರೂಪುಗೊಳ್ಳುತ್ತಿರುವುದು ಬಹಳ ಅಪರೂಪ ಎಂದು ಸೈಮೆಟ್ ವೆದರ್ ನ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ. ವಿವಿಧ ಮಾದರಿಗಳು ವಿಭಿನ್ನ ಹಾದಿಗಳನ್ನು ತೋರಿಸುತ್ತಿವೆ. ಕೆಲವು ಆಂಧ್ರಪ್ರದೇಶದ ಕಡೆಗೆ ಮತ್ತು ಇನ್ನು ಕೆಲವು ಮ್ಯಾನ್ಮಾರ್ ಕಡೆಗೆ ಚಲಿಸುವುದನ್ನು ಸೂಚಿಸುತ್ತಿವೆ. ಮುಂದಿನ 48 ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಮುದ್ರದ ಮೇಲ್ಮ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಿರುವುದು ಹೆಚ್ಚಿನ ಬೆಳವಣಿಗೆಗೆ ಅನುಕೂಲಕರವಾಗಿದ್ದರೂ, ಪ್ರಸ್ತುತ ಈ ವ್ಯವಸ್ಥೆಯು ಚಂಡಮಾರುತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿಲ್ಲ. ಹೆಚ್ಚಿನ ಮಾದರಿಗಳು ಉತ್ತರ ತಮಿಳುನಾಡಿಗೆ ಯಾವುದೇ ಬೆದರಿಕೆಯನ್ನು ಸೂಚಿಸಿಲ್ಲ. ಉತ್ತರ ಹಿಂದೂ ಮಹಾಸಾಗರದಲ್ಲಿ ಸಾಮಾನ್ಯವಾಗಿ ಮಾನ್ಸೂನ್ ಋತುಗಳಲ್ಲಿ ಸುಮಾರು ಮೂರರಿಂದ ನಾಲ್ಕು ಚಂಡಮಾರುತಗಳು ಸಂಭವಿಸುತ್ತವೆ ಎಂದು ಪಲಾವತ್ ತಿಳಿಸಿದ್ದಾರೆ.
ವಾಯುಭಾರ ಕುಸಿತದಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ.
ಇದೇ ವೇಳೆ, ಇತ್ತೀಚೆಗೆ ಒಂಭತ್ತು ಮೀನುಗಾರರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯು ಚೆನ್ನೈ ಮೀನುಗಾರಿಕೆ ಬಂದರಿನಿಂದ ಸಮುದ್ರಕ್ಕೆ ತೆರಳಿರುವ ಎಲ್ಲ ಯಾಂತ್ರೀಕೃತ ಮತ್ತು ಮೋಟಾರ್ ದೋಣಿಗಳು ನ.12ರೊಳಗೆ ದಡಕ್ಕೆ ಹಿಂತಿರುಗುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಿದೆ.








