





ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಶಾಂತ್ ಭಂಡಾರಿ ಅವರನ್ನು ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಸುರತ್ಕಲ್ ಪೊಲೀಸ್ ಠಾಣೆಯ ಅಪರಾಧ ಕ್ರಮ ಸಂಖ್ಯೆ 95/2018ರಂತೆ ಕಲಂ 341, 323, 324, 504, 506 ಹಾಗೂ 307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವು SC No.108/2021ರಲ್ಲಿ ವಿಚಾರಣೆಗೆ ಒಳಪಟ್ಟಿತ್ತು.
ದೂರುದಾರ ಗಂಗಾಧರ ಪೂಜಾರಿ ಅವರು 2018ರ ಮಾರ್ಚ್ 10ರಂದು ರಾತ್ರಿ 7.45ರ ಸುಮಾರಿಗೆ ಮನೆಯಿಂದ ಭೊಂದೆಲ್ ಕಡೆಗೆ ತೆರಳುತ್ತಿದ್ದ ವೇಳೆ, 5ನೇ ಬ್ಲಾಕ್ನಿಂದ 9ನೇ ಬ್ಲಾಕ್ಗೆ ಸಂಪರ್ಕಿಸುವ ಒಳರಸ್ತೆಯಲ್ಲಿ ಆರೋಪಿಯು ದ್ವಿಚಕ್ರ ವಾಹನದಲ್ಲಿ ಬಂದು ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಹರಿತವಾದ ಚೂರಿಯಿಂದ ದೇಹದ ವಿವಿಧ ಭಾಗಗಳಿಗೆ ಇರಿದು ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಗೋಪಾಲ್ ಜೋಗಲೇಕರ್ ಅವರು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆಯಲ್ಲಿ ಸರಕಾರಿ ಅಭಿಯೋಜನೆ ಪರ ಸುಮಾರು 14 ಸಾಕ್ಷಿಗಳು ಸಾಕ್ಷ್ಯ ನೀಡಿದ್ದರು.
ಆದರೆ ಆರೋಪಿಯ ವಿರುದ್ಧದ ಆರೋಪಗಳು ಸಮರ್ಪಕವಾಗಿ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಶಾಂತ್ ಭಂಡಾರಿ ಅವರನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿ ಪರವಾಗಿ ವಿಟ್ಲದ ವಕೀಲ ಶಿವಾನಂದ ಎಂ. ವಕ್ಕೆತ್ತಿರಿ ವಾದ ಮಂಡಿಸಿದ್ದರು.








