

ಹಾಸನ: ಜಿಲ್ಲಾಧಿಕಾರಿ ಕಚೇರಿಯ ಪಿಎಗೆ ಸಂಬಂಧಿಸಿದ ವಾಟ್ಸ್ಆ್ಯಪ್ ಚಾಟ್ ಆಧರಿಸಿ ಕೇಳಿಬಂದಿರುವ ಲಂಚದ ಆರೋಪಗಳನ್ನು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸಾರಾಸಗಟಾಗಿ ನಿರಾಕರಿಸಿದ್ದು, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಾಟ್ಸ್ಆ್ಯಪ್ ಚಾಟ್ಗಳು ಸಂಪೂರ್ಣ ಅನಧಿಕೃತ ಹಾಗೂ ಆಧಾರರಹಿತವಾಗಿವೆ. ತಾವು ಯಾವುದೇ ಅಕ್ರಮ ಅಥವಾ ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಒಂದು ವೇಳೆ ಜಿಲ್ಲಾಧಿಕಾರಿ ಕಚೇರಿಯ ಪಿಎ ಅಥವಾ ಸಂಬಂಧಪಟ್ಟ ವಿಭಾಗದಿಂದ ಇಂತಹ ತಪ್ಪು ಸಂದೇಶಗಳು ರವಾನೆಯಾಗಿರುವುದು ಸಾಬೀತಾದರೆ, ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ವ್ಯಕ್ತಿತ್ವ ಹರಣ ಮಾಡುವುದು, ಅಧಿಕಾರಿಗಳನ್ನು ಮಾನಸಿಕವಾಗಿ ಕುಗ್ಗಿಸುವುದು ಹಾಗೂ ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಪಾರದರ್ಶಕ ತನಿಖೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿ ಎಫ್ಐಆರ್ ದಾಖಲಿಸಲಾಗುತ್ತಿದ್ದು, ತನಿಖೆಯ ಬಳಿಕ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಎದುರಿಸಲೇಬೇಕು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.








