




ಬೆಂಗಳೂರು: ಹೈದರಾಬಾದ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹೈದರಾಬಾದ್ ಮೂಲದ ನೇನಾವತ್ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ವಿಲ್ಸನ್ ಗಾರ್ಡನ್‌ನ 10ನೇ ಕ್ರಾಸ್‌ನ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ, ವೃದ್ಧ ದಂಪತಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ. ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿನೋದ್ ಕುಮಾರ್‌ನನ್ನು ಬಂಧಿಸಿದ್ದು, ಆತನಿಂದ ಸುಮಾರು ₹40 ಲಕ್ಷ ಮೌಲ್ಯದ 271 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ, ಕಳ್ಳತನದ ಉದ್ದೇಶದಿಂದ ಹೈದರಾಬಾದ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಕೃತ್ಯ ಎಸಗುತ್ತಿದ್ದುದಾಗಿ ಆರೋಪಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಹೈದರಾಬಾದ್‌ನಲ್ಲೂ ಆತನ ವಿರುದ್ಧ ಹಲವು ಪ್ರಕರಣಗಳಿದ್ದು, ಅಲ್ಲಿನ ಪೊಲೀಸರ ತನಿಖೆ ಹಾಗೂ ಹುಡುಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರನ್ನು ಕಳ್ಳತನಕ್ಕೆ ಆಯ್ಕೆ ಮಾಡಿಕೊಂಡಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ಹಿನ್ನೆಲೆ ಹಾಗೂ ಬೆಂಗಳೂರಿನಲ್ಲಿ ನಡೆಸಿರುವ ಇತರ ಕಳ್ಳತನ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







