
ವಿಟ್ಲ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು, ಇಬ್ಬರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಜುಲೈ 4ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಾಲ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ KA-51-AA-3057 ಹಾಗೂ KA-21-C-6924 ಸಂಖ್ಯೆಯ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳು ಪತ್ತೆಯಾದವು.ಲಾರಿಗಳ ಚಾಲಕರಾದ ಪುತ್ತೂರು ತಾಲೂಕಿನ ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಪಾನ್ (28) ಹಾಗೂ ಕಬಕ ನಿವಾಸಿ ನೌಷದ್ (26) ಅವರನ್ನು ವಿಚಾರಿಸಿದಾಗ, ಕಡಬ ತಾಲೂಕಿನ ಅಲಂಕಾರ್ ಪ್ರದೇಶದಿಂದ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಎರಡೂ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 149/2026ರಡಿ BNS-2023ರ ಕಲಂ 303(2), MMDR ಕಾಯ್ದೆಯ ಕಲಂ 4(1), 4(1A), 21 ಹಾಗೂ ಕರ್ನಾಟಕ ಕಿರು ಖನಿಜ ನಿಯಮಗಳು-1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.








