
ಮಂಗಳೂರು: 2018ರಲ್ಲಿ ಪಣಂಬೂರು ಸಮೀಪದ ತೋಟ ಬೆಂಗ್ರೆ ಬೀಚ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.2018ರ ನವೆಂಬರ್ 17ರಂದು ಯುವತಿಯೊಬ್ಬರು ತನ್ನ ಸ್ನೇಹಿತನೊಂದಿಗೆ ತೋಟ ಬೆಂಗ್ರೆ ಬೀಚ್‌ಗೆ ತೆರಳಿದ್ದ ವೇಳೆ, ಏಳು ಮಂದಿ ಅಪರಿಚಿತರು ಅವರ ಮೇಲೆ ದಾಳಿ ನಡೆಸಿದ್ದರು.


ಯುವತಿಯ ಸ್ನೇಹಿತನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ ಆರೋಪಿಗಳು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದರು. ಭಯದಿಂದ ಯುವತಿ ತಕ್ಷಣ ದೂರು ನೀಡದೆ, ಎರಡು ದಿನಗಳ ಬಳಿಕ ಆರೋಪಿಗಳಿಂದ ಕರೆ ಬಂದ ನಂತರ ಕುಟುಂಬದವರಿಗೆ ವಿಷಯ ತಿಳಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಾಗಿದ್ದರು. ಉಳಿದ ನಾಲ್ವರು ಆರೋಪಿಗಳಾದ ಪ್ರಜ್ವಲ್ @ ಪಜ್ಜು, ಅರುಣ್ ಅಮೀನ್ @ ಅರುಣ್ ಎಸ್., ಆದಿತ್ಯ ಸಾಲಿಯಾನ್ @ ಆದಿತ್ಯ ಹಾಗೂ ಅಬ್ದುಲ್ ರಿಯಾಝ್ @ ರಿಯಾಝ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಅಂದಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಕಲಾವತಿ ನಡೆಸಿದ್ದು, ಬಳಿಕ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ತನಿಖೆ ಮುಂದುವರಿಸಿದ್ದರು. ನಂತರ ಐಪಿಎಸ್ ಅಧಿಕಾರಿ ಶ್ರೀನಿವಾಸ ಗೌಡ ಸಮಗ್ರ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಪೂರ್ಣಗೊಂಡು, ಜುಲೈ 27, 2026ರಂದು ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ತೀರ್ಪು ನೀಡಿತ್ತು.
ಅದರಂತೆ ಜುಲೈ 30ರಂದು ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಐಪಿಸಿ ಕಲಂ 376(ಡಿ) ಅಡಿ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ಸೇರಿದಂತೆ ವಿವಿಧ ಕಲಂಗಳಡಿ ಶಿಕ್ಷೆ ಮತ್ತು ದಂಡ ವಿಧಿಸಿದರು.ಇದಲ್ಲದೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ವತಿಯಿಂದ ಸಂತ್ರಸ್ತ ಯುವತಿಗೆ ₹60,000 ಪರಿಹಾರ ಮಂಜೂರು ಮಾಡಲಾಗಿದೆ.








