
ಪುತ್ತೂರು, ಆ.3: ರಾಜ್ಯದಲ್ಲೇ ಮೊದಲ ತಿರಂಗಾ ಯಾತ್ರೆ ಆಗಸ್ಟ್ 7ರಂದು ಪುತ್ತೂರಿನಲ್ಲಿ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 7ರಂದು ಸಂಜೆ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ತಿರಂಗಾ ಯಾತ್ರೆ ಆರಂಭವಾಗಿ, ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಸಿ.ಟಿ. ರವಿ, ಜಿಲ್ಲಾ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ದೇಶಾದ್ಯಂತ ಸ್ವಾತಂತ್ರ್ಯೋತ್ಸವ ಅಂಗವಾಗಿ ತಿರಂಗಾ ಅಭಿಯಾನ ನಡೆಯುತ್ತಿದ್ದು, ಆಗಸ್ಟ್ 10ರಿಂದ 15ರವರೆಗೆ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳು ನಡೆಯಲಿವೆ. ಆದರೆ ರಾಜ್ಯದ ಮೊದಲ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಲಿದ್ದು, ರಾಷ್ಟ್ರಭಕ್ತಿ ಸಂದೇಶ ಸಾರುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶಭಕ್ತಿಯ ಭಾವನೆ ಬಲಪಡಿಸುವ ಕೆಲಸ ಮಾಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸಿ, ಧ್ವಜದೊಂದಿಗೆ ಸೆಲ್ಫಿ ತೆಗೆದು ಅಪ್‌ಲೋಡ್ ಮಾಡುವಂತೆ ಕರೆ ನೀಡಲಾಗಿದೆ. ಇದು ಗಡಿಯಲ್ಲಿ ದೇಶ ರಕ್ಷಿಸುವ ಸೈನಿಕರು ಹಾಗೂ ಅನ್ನದಾತ ರೈತರಿಗೆ ಗೌರವ ಸಲ್ಲಿಸುವ ಅಭಿಯಾನವಾಗಿದೆ ಎಂದರು.ಈ ವೇಳೆ ಕಾಂಗ್ರೆಸ್ ವಿರುದ್ಧ ಟೀಕಿಸಿದ ಕಿಶೋರ್ ಕುಮಾರ್ ಪುತ್ತೂರು, ರಾಷ್ಟ್ರಭಕ್ತಿ ಮತ್ತು ರಾಷ್ಟ್ರಧ್ವಜದ ಗೌರವ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ತಿರಂಗಾ ಯಾತ್ರೆ ಬಿಜೆಪಿ ಬ್ಯಾನರ್‌ನಡಿ ಅಲ್ಲ, ರಾಷ್ಟ್ರಧ್ವಜದ ಅಡಿಯಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು, ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಎಲ್ಲ ವರ್ಗದ ಜನರು ಭಾಗವಹಿಸಬೇಕು ಎಂದು ಆಹ್ವಾನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ದಯಾನಂದ್ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಯತೀಶ್ ಆರುವಾರ್, ಪ್ರಸನ್ನ ಮಾರ್ತಾ, ಸುನಿಲ್ ಹೆಗ್ಡೆ, ರಾಜೇಶ್ ಬನ್ನೂರು ಹಾಗೂ ಸತೀಶ್ ನಾಯ್ಕ್ ಉಪಸ್ಥಿತರಿದ್ದರು.








