

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಂತರ್‌ರಾಷ್ಟ್ರೀಯ ವಿಮಾನ ಸಂಪರ್ಕ ಜಾಲದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಯುಎಇಯ ಪ್ರಮುಖ ನಗರವಾದ ರಾಸ್ ಅಲ್ ಖೈಮಾಗೆ ಮಂಗಳೂರಿನಿಂದ ನೇರ ವಿಮಾನ ಸಂಪರ್ಕ ಸೇವೆಯನ್ನು ಸೋಮವಾರ (ಅ.26) ಅಧಿಕೃತವಾಗಿ ಆರಂಭಿಸಿದೆ.ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ವಾರದಲ್ಲಿ ಎರಡು ದಿನ (ಸೋಮವಾರ ಮತ್ತು ಶನಿವಾರ) ವಿಮಾನ ಹಾರಾಟ ಸೌಲಭ್ಯ ಇರುತದೆ.ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ 2026ರ ಚಳಿಗಾಲದ ವೇಳಾಪಟ್ಟಿಯ ಎರಡನೇ ದಿನದಂದು ಈ ಸೇವೆಗೆ ಚಾಲನೆ ನೀಡಲಾಗಿದೆ. ಮಂಗಳೂರಿನಿಂದ ಸಂಪರ್ಕ ಹೊಂದುವ ಅಂತರ್‌ರಾಷ್ಟ್ರೀಯ ನಗರಗಳ ಪಟ್ಟಿಗೆ ರಾಸ್ ಅಲ್ ಖೈಮಾ ಹೊಸದಾಗಿ ಸೇರ್ಪಡೆಗೊಂಡಿದೆ.

*ಮೊದಲ ವಿಮಾನಕ್ಕೆ ಉತ್ತಮ ಸ್ಪಂದನೆ: ಸೋಮವಾರ ಮಂಗಳೂರಿನಿಂದ ಹೊರಟ ಚಾಲನಾ ವಿಮಾನ ಐಎಕ್ 871 ರಲ್ಲಿ ಒಟ್ಟು 146 ಪ್ರಯಾಣಿಕರು ರಾಸ್ ಅಲ್ ಖೈಮಾಗೆ ಪ್ರಯಾಣ ಬೆಳೆಸಿದರು. ಇನ್ನು ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ಐಎಕ್ಸ್ 872 ವಿಮಾನದಲ್ಲಿ 36 ಮಂದಿ ಪ್ರಯಾಣಿಕರು ಆಗಮಿಸಿದರು. ಹೊಸ ಮಾರ್ಗಕ್ಕೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
*ವಿಮಾನ ಸಂಚಾರದ ವೇಳಾಪಟ್ಟಿ: ಪ್ರತಿ ಸೋಮವಾರ ಮತ್ತು ಶನಿವಾರ ಮಂಗಳೂರಿನಿಂದ ಐಎಕ್ಸ್ 871 ವಿಮಾನವು ಬೆಳಗ್ಗೆ 9:30ಕ್ಕೆ ರಾಸ್ ಅಲ್ ಖೈಮಾಗೆ ತೆರಳಲಿದೆ. ಐಎಕ್ಸ್ 872 ಸಂಜೆ 6:25ಕ್ಕೆ ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ಆಗಮಿಸಲಿದೆ.ರಾಸ್ ಅಲ್ ಖೈಮಾ ನಗರವು ದುಬೈ ಮತ್ತು ಶಾರ್ಜಾಗೆ ಕೇವಲ ಒಂದು ಗಂಟೆಯ ರಸ್ತೆ ಪ್ರಯಾಣದ ಅಂತರ ದಲ್ಲಿದ್ದು, ಯುಎಇಯಲ್ಲಿರುವ ಕರಾವಳಿ ಭಾಗದ ಅನಿವಾಸಿ ಭಾರತೀಯರಿಗೆ ಈ ನೂತನ ಸೇವೆ ಅತ್ಯಂತ ಅನುಕೂಲಕರವಾಗಲಿದೆ.
.ಯುಎಇ ಹಾಗೂ ಗಲ್ಫ್ ಸಂಪರ್ಕ ಬಲವರ್ಧನೆ: ಮಂಗಳೂರು ವಿಮಾನ ನಿಲ್ದಾಣದ ಪ್ರಸಕ್ತ ಚಳಿಗಾಲದ ವೇಳಾ ಪಟ್ಟಿಯ ಪ್ರಕಾರ, ವಾರಕ್ಕೆ ಒಟ್ಟು 58 ಅಂತರ್‌ರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಇದರಲ್ಲಿ ಯುಎಇಗೆ ಒಟ್ಟು 38 ವಿಮಾನಗಳು (ದುಬೈಗೆ 20, ಅಬುಧಾಬಿಗೆ 16 ಹಾಗೂ ರಾಸ್ ಅಲ್ ಖೈಮಾಗೆ 2) ಹಾರಾಟ ನಡೆಸುತ್ತಿದೆ. ಉಳಿದ ವಿಮಾನಗಳು ಮಧ್ಯಪ್ರಾಚ್ಯದ ಇತರೆ ಪ್ರಮುಖ ನಗರಗಳಿಗೆ ಸಂಚರಿಸಲಿವೆ
.ಡಿಹೊಸ ಸೇರ್ಪಡೆಯೊಂದಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ಈಗ ಒಟ್ಟು 9 ಅಂತರ್‌ರಾಷ್ಟ್ರೀಯ ಮತ್ತು 6 ದೇಶೀಯ ನಗರಗಳಿಗೆ ನೇರ ಸಂಪರ್ಕ ಸೌಲಭ್ಯ ಇರುತ್ತದೆ ಎಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.








