

ಚೆನ್ನೈ: ಮಹಿಳಾ ಜಿಲ್ಲಾಧಿಕಾರಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಆಡಳಿತಾರೂಢ ಟಿವಿಕೆ ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲಾಕುರಿಚಿ ಕ್ಷೇತ್ರದ ಶಾಸಕರಾಗಿರುವ ಅರುಳ್ ವಿಘ್ನೇಶ್ ಅವರನ್ನು ಶುಕ್ರವಾರ ಸಂಜೆ ಟಿ. ರಾಮಸಾಮಿ ನಗರದಲ್ಲಿರುವ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲಾಕುರಿಚಿ ಜಿಲ್ಲಾಧಿಕಾರಿಗೆ ಶಾಸಕ ಅರುಳ್ ವಿಘ್ನೇಶ್ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ನವೆಂಬರ್ 23ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಐ. ಶಾನಾಜ್ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ನವೆಂಬರ್ 25ರಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ಸಮನ್ಸ್ ಜಾರಿ ಮಾಡಿದ್ದರು.ಶಾಸಕರ ವಿರುದ್ಧ ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (ಲೈಂಗಿಕ ಕಿರುಕುಳ), 78 (ಹಿಂಬಾಲಿಸುವುದು) ಮತ್ತು 132 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಬಂಧನಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಹಿರಿಯ ಪೊಲೀಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆಯೂ ಸೂಚಿಸಿತ್ತು.
ಇದರ ಬೆನ್ನಲ್ಲೇ ತಿರುಪ್ಪೂರ್ ಎಸ್‌ಪಿ ಸೃಷ್ಟಿ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಐಜಿಪಿ ಎನ್. ಕಾಮಿನಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ.ಆರೋಪ ನಿರಾಕರಿಸಿದ್ದ ಶಾಸಕಬಂಧನಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಶಾಸಕ ಅರುಳ್ ವಿಘ್ನೇಶ್, ತಮ್ಮ ವಿರುದ್ಧದ ಆರೋಪಗಳನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. ಮತ್ತೊಂದೆಡೆ, ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಈ ಪ್ರಕರಣವನ್ನು ಡಿಎಂಕೆ ಮತ್ತು ಸಂಸದೆ ಕನಿಮೊಳಿ ಅವರು ಟಿವಿಕೆ ಸರ್ಕಾರದ ವಿರುದ್ಧ ಸೃಷ್ಟಿಸಿರುವ ರಾಜಕೀಯ ಕಥೆ ಎಂದು ಆರೋಪಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಆರಂಭದಲ್ಲಿ ಸಚಿವರು ಮತ್ತು ಮೈತ್ರಿ ಪಕ್ಷದ ನಾಯಕರು ಶಾಸಕರನ್ನು ರಕ್ಷಿಸಲು ಯತ್ನಿಸಿದ್ದರು. ಮಹಿಳಾ ಜಿಲ್ಲಾಧಿಕಾರಿ ಎಲ್ಲ ಒತ್ತಡಗಳನ್ನು ಎದುರಿಸಿ ದೂರು ದಾಖಲಿಸಿದ್ದರು.
ಹೈಕೋರ್ಟ್ ಮತ್ತು ಮಹಿಳಾ ಆಯೋಗ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಅನಿವಾರ್ಯವಾಗಿ ಬಂಧನ ಮಾಡಲಾಗಿದೆ ಎಂದು ಟಿವಿಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.







