
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಉಪ ವರ್ಗೀಕರಣ ಸಂಬಂಧ ರಾಜ್ಯ ಸರಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.ಅಖಿಲ ಕರ್ನಾಟಕ ಕೊರಚ ಮಹಾಸಂಘದ ಅಧ್ಯಕ್ಷ ಎಚ್.ಎನ್. ರಾಮಚಂದ್ರಪ್ಪ ಹಾಗೂ ಇತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ (ಗುರುವಾರ) ಮುಂದೂಡಿತು.ಇದೇ ವೇಳೆ, ಒಳಮೀಸಲಾತಿ ವರ್ಗೀಕರಣ ಆಧರಿಸಿ ರಾಜ್ಯ ಸರಕಾರ ನೇಮಕಾತಿ ಪ್ರಕ್ರಿಯೆ ನಡೆಸಬಹುದು.
ಆದರೆ, ಅರ್ಹ ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ನೀಡುವಂತಿಲ್ಲ ಎಂದು ಇದೇ ವಿಚಾರವಾಗಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ನೀಡಲಾಗಿರುವ ಮಧ್ಯಂತರ ಆದೇಶವು ಈ ಅರ್ಜಿಗೂ ಅನ್ವಯವಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.








