
ಮಂಗಳೂರು: ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಪೊಲೀಸರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪೈಕಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.ಮೂಲತಃ ವಿಟ್ಲ ಮುಳ್ಳೂರಿನ ಪ್ರಸಕ್ತ ಪಾಂಡೇಶ್ವರದ ಶಿವನಗರದಲ್ಲಿ ವಾಸವಾಗಿರುವ ರವಿರಾಜ್ (39) ಎಂಬವರಿಂದ ಸುಲಿಗೆ ಮಾಡಿದ ಆರೋಪದಲ್ಲಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ಗಳಾದ ಶಿವರಾಜ್ ಮತ್ತು ಉಮನಾಥ ಹಾಗೂ ಹೊಯ್ಸಳ ವಾಹನದ ಚಾಲಕ ಹೆಡ್ಕಾನ್ಸ್ಟೇಬಲ್ ಹೀರಣ್ಣ ಬೆನ್ನಿ ವಿರುದ್ಧ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ಶಿವರಾಜ್ ಮತ್ತು ಹೀರಣ್ಣ ಬೆನ್ನಿ ಎಂಬವರನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಆ. 25ರಂದು ರಾತ್ರಿ 10ಕ್ಕೆತಾನು ನೆಹರೂ ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಆರ್ಟಿಒ ಬಳಿಯಿರುವ ಹಾಲಿನ ಬೂತಿನ ಮುಂಭಾಗ ತಲುಪಿದಾಗ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಎಂಬವರು ತನ್ನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಶಿವರಾಜ್ ಬೆತ್ತದಿಂದ ತನ್ನ ಭುಜ ಮತ್ತು ಕಾಲಿಗೆ ಹೊಡೆದು ಮೊಬೈಲ್ ಕಸಿದುಕೊಂಡಿದ್ದಾರೆ.ಮೊಬೈಲ್ ಕವರ್ನಲ್ಲಿದ್ದ 300 ರೂ.ವನ್ನು ಕಿತ್ತು ಅವಾಚ್ಯ ಶಬ್ದಗಳಿಂದ ಬೈದು ಮತ್ತೊಮ್ಮೆ ಕಂಡರೆ ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.ಆ. 27ರಂದು ರಾತ್ರಿ 9:30ಕ್ಕೆ ಅದೇ ಸ್ಥಳದಲ್ಲಿ ಹೊರಗಡೆ ರಸ್ತೆಯಲ್ಲಿ ಹೋಗುವಾಗ ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ಮತ್ತೆ ತಡೆದು ನಿಲ್ಲಿಸಿ ಮೊಬೈಲ್ ಕಸಿದು, ಅದರ ಕವರಿನಲ್ಲಿದ್ದ 2 ಎಟಿಎಂ ಕಾರ್ಡ್, 1,000 ರೂ. ನಗದು ಮತ್ತು ದ್ವಿಚಕ್ರ ವಾಹನ ಕೀ ತೆಗೆದು ಕೊಂಡರಲ್ಲದೆ ಇಲ್ಲೇ ನಿಲ್ಲು ವಾಪಸ್ ಬರುತ್ತೇವೆ ಎಂದು ಹೋಗಿದ್ದಾರೆ.
ರಾತ್ರಿ 11:30ಕ್ಕೆ ಮರಳಿ ಬಂದು ತನ್ನನ್ನು ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ, ಇನ್ನೂ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲ. ಎಟಿಎಂ ಕಾರ್ಡ್ ಮಾತ್ರ ಇದೆ ಎಂದಾಗ ಮೊಬೈಲ್ ಪಾಸ್ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ ಅದರಲ್ಲಿ 5 ಸಾವಿರ ರೂ. ಇರುವುದನ್ನು ಕಂಡು 2 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ. ಬ್ಯಾಂಕ್ ಲೋನ್ ಕಟ್ಟಲು ಬಾಕಿ ಇದೆ. ತನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಕೇಳದೆ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಎಟಿಎಂಗೆ ಕರೆದುಕೊಂಡು ಹೋಗಿ ಹಣ ಡ್ರಾ ಮಾಡಿ ತರುವಂತೆ ಬೆದರಿಕೆಗೆ ಹಾಕಿದ್ದಾರೆ.
ಆಗ 1 ಸಾವಿರ ರೂ. ಡ್ರಾ ಮಾಡಿ, ಮೊಬೈಲ್ ಕವರ್ನಲ್ಲಿದ್ದ 1,000 ರೂ. ಸೇರಿಸಿ 2 ಸಾವಿರ ರೂ. ಪಡೆದುಕೊಂಡಿದ್ದಾರೆ. ಬಳಿಕ ತನ್ನ ಮೊಬೈಲ್, ಇನ್ನೊಂದು ಎಟಿಎಂ ಕಾರ್ಡ್, ವಾಹನದ ಕೀ ಕೊಟ್ಟು ಹೋಗಿದ್ದಾರೆ.ನ.4ರಂದು ಕೆಲಸ ಮುಗಿಸಿ ನೆಹರೂ ಮೈದಾನದ ಹೊರಗೆ ನಿಂತಿರುವಾಗ ರಾತ್ರಿ 9:15ಕ್ಕೆ ಹೊಯ್ಸಳ ವಾಹನದಲ್ಲಿ ಬಂದ ಶಿವರಾಜ್ ಮತ್ತು ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಹೊಯ್ಸಳ ವಾಹನದ ಬಳಿ ಕರೆದಿದ್ದಾರೆ. ಅಲ್ಲಿ ಹೋದಾಗ ಮೊಬೈಲ್, ದ್ವಿಚಕ್ರ ವಾಹನದ ಕೀಯನ್ನು ಪಡೆದು ತನ್ನನ್ನು ವಾಹನದಲ್ಲಿ ಕುಳ್ಳಿರಿಸಿ, ಚಾಲಕನಾಗಿದ್ದ ಶಿವರಾಜ್ ನೀನು ಫೈನ್ ಕಟ್ಟಬೇಕು ಎಂದಿದ್ದಾರೆ. ನನ್ನಲ್ಲಿ ಹಣ ಇಲ್ಲ, ಯಾಕೆ ಫೈನ್ ಕಟ್ಟಬೇಕು ಎಂದು ತಾನು ಕೇಳಿದಾಗ ನಾಳೆ ಬೆಳಗ್ಗೆ 10ಕ್ಕೆ ಠಾಣೆಗೆ ಬಾ ಎಂದು ಸೂಚಿಸಿದ್ದಾರೆ. ಅಲ್ಲದೆ ತನ್ನ ಮೊಬೈಲ್ ಸಂಖ್ಯೆ ಪಡೆದು ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದಾರೆ. ಹಣ ನೀಡಿದರೆ ವಾಹನ ಕೊಡುತ್ತೇನೆ ಎಂದು ಚಾಲಕ ಶಿವರಾಜ್ ಹೇಳಿದಾಗ ತಾನು ಠಾಣೆಗೆ ಬರುತ್ತೇನೆ ಎಂದಿರುವೆ.
ರಾತ್ರಿ ಸುಮಾರು ರಾತ್ರಿ 10:38ಕ್ಕೆ ಉಮಾನಾಥ ಕರೆ ಮಾಡಿ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಹೀಗೆ ವಿನಾಕಾರಣ ತನಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಒಡ್ಡಿ, ಬಲತ್ಕಾರವಾಗಿ ಹಣವನ್ನು ಕಸಿದುಕೊಂಡ ಪೊಲೀಸರಾದ ಶಿವರಾಜ್, ಹೀರಣ್ಣ ಬೆನ್ನಿ, ಉಮನಾಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೃತ್ತಿಯಲ್ಲಿ ಇಲೆಕ್ನಿಶಿಯನ್ ಆಗಿರುವ ರವಿರಾಜ ಒತ್ತಾಯಿಸಿದ್ದಾರೆ.








