Sunday, June 28, 2026
spot_imgspot_img
spot_imgspot_img

ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿಗೂ ಅನುಕಂಪದ ನೇಮಕಾತಿ ಅರ್ಹತೆ: ಹೈಕೋರ್ಟ್

- Advertisement -
- Advertisement -

ಬೆಂಗಳೂರು: ಮೃತ ಸರ್ಕಾರಿ ನೌಕರನ ಮೇಲೆ ಅವಲಂಬಿತಳಾಗಿ ಅವರೊಂದಿಗೇ ವಾಸಿಸುತ್ತಿದ್ದ ವಿವಾಹಿತ ಪುತ್ರಿಯೂ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗಕ್ಕೆ ಅರ್ಹಳಾಗಿರುತ್ತಾಳೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚಿತ್ರದುರ್ಗದ ಜೋಗಿಮಟ್ಟಿಯ ಆರ್. ಸವಿತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.ಕುಟುಂಬದ ವ್ಯಾಖ್ಯಾನದಲ್ಲಿ ವಿವಾಹಿತ ಪುತ್ರಿಯರನ್ನೂ ಸೇರಿಸಿರುವ ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ತಿದ್ದುಪಡಿ ಆರಂಭದಿಂದಲೇ ಜಾರಿಯಲ್ಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹೀಗಾಗಿ, ವಿವಾಹಿತ ಪುತ್ರಿ ಎಂಬ ಕಾರಣಕ್ಕೆ ಅನುಕಂಪದ ನೇಮಕಾತಿಯ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದರೊಂದಿಗೆ, ಸವಿತಾ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಮರುಪರಿಶೀಲಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.ನ್ಯಾಯಪೀಠದ ಪ್ರಕಾರ, ‘ಕುಟುಂಬ’ ಹಾಗೂ ‘ಅವಲಂಬಿ’ ಎಂಬ ಪದಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಅವಿವಾಹಿತ, ವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಎಂಬ ಭೇದವಿಲ್ಲದೆ, ಮೃತ ಸರ್ಕಾರಿ ನೌಕರನ ಮೇಲೆ ಅವಲಂಬಿತರಾಗಿ ಅವರೊಂದಿಗೇ ವಾಸಿಸುತ್ತಿದ್ದರೆ ಅವರು ಅನುಕಂಪದ ನೇಮಕಾತಿಗೆ ಅರ್ಹರಾಗುತ್ತಾರೆ.ಅರ್ಜಿದಾರರ ತಾಯಿ ನಿವೃತ್ತ ಸರ್ಕಾರಿ ನೌಕರರಾಗಿದ್ದು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣವನ್ನೂ ನೇಮಕಾತಿ ನಿರಾಕರಿಸಲು ಬಳಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಚಳ್ಳಕೆರೆ ತಾಲೂಕಿನ ಪ್ರಿ-ಮೆಟ್ರಿಕ್ ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ಗ್ರೂಪ್-ಡಿ ಅಡುಗೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಸವಿತಾ ಅವರ ತಂದೆ 2014ರ ಫೆಬ್ರವರಿ 25ರಂದು ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದರು. ನಂತರ ಸವಿತಾ ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ತಂದೆಯ ಮರಣಕ್ಕೂ ಮುನ್ನವೇ ವಿವಾಹವಾಗಿದ್ದ ಕಾರಣ ಹಾಗೂ ತಾಯಿ ಪಿಂಚಣಿದಾರರಾಗಿದ್ದಾರೆ ಎಂಬ ಆಧಾರದ ಮೇಲೆ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಕೆಎಟಿಯೂ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋದ ಸವಿತಾ ಪರವಾಗಿ ಇದೀಗ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

- Advertisement -

Related news

error: Content is protected !!