

ಮುಂಬೈ: ಶಾಂಪೂ, ಸೋಪು ಹಾಗೂ ತಾಳೆ ಎಣ್ಣೆಯನ್ನು ಬಳಸಿ ನಕಲಿ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (ಎಫ್‌ಡಿಎ) ಭೇದಿಸಿದ್ದು, ಈ ಸಂಬಂಧ 13 ಮಂದಿಯನ್ನು ಬಂಧಿಸಿದೆ. ಜುಲೈ 4 ಮತ್ತು 5ರಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಜಾಲದ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.ಥಾಣೆ, ಅಹಿಲ್ಯಾನಗರ್, ಸೋಲಾಪುರ್, ಜಲ್ನಾ ಮತ್ತು ಪುಣೆ ಜಿಲ್ಲೆಗಳ ವಿವಿಧೆಡೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 26 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ ಆಯುಕ್ತ ತುಕಾರಾಂ ಮುಂಡೆ ಮಾತನಾಡಿ, “ನಾವು ಕೇವಲ ಒಂದು ಕಲಬೆರಕೆ ಘಟಕದ ವಿರುದ್ಧ ಕ್ರಮ ಕೈಗೊಂಡಿಲ್ಲ. ವಿತರಕರು, ಸಾಗಣೆದಾರರು, ಮಧ್ಯವರ್ತಿಗಳು, ಶೀತಲ ಕೇಂದ್ರಗಳು ಹಾಗೂ ಸಂಸ್ಕರಣಾ ಕೇಂದ್ರಗಳನ್ನು ಒಳಗೊಂಡ ಇಡೀ ಸರಬರಾಜು ಸರಪಣಿ ಜಾಲದ ವಿರುದ್ಧ ಕ್ರಮ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.

ದಾಳಿಯ ವೇಳೆ ನಕಲಿ ಹಾಲು ತಯಾರಿಕೆಗೆ ಬಳಸಲಾಗುತ್ತಿದ್ದ 1.48 ಕೋಟಿ ರೂ. ಮೌಲ್ಯದ ಶಾಂಪೂ, ಸೋಪು, ತಾಳೆ ಎಣ್ಣೆ ಹಾಗೂ ಎಮಲ್ಸಿಫೈಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ವಸ್ತುಗಳನ್ನು ಪುಣೆ ಜಿಲ್ಲೆಯ ಮಂಚರ್ ಪ್ರದೇಶದಿಂದ ಪೂರೈಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಕಲಬೆರಕೆ ಹಾಲಿನ 49 ಮಾದರಿಗಳನ್ನು ಪರೀಕ್ಷೆಗಾಗಿ ವಶಪಡಿಸಿಕೊಳ್ಳಲಾಗಿದೆ. ಪುಣೆಯ ಸುಶಾಂತ್ ಹಿಂಗೆ ಈ ಜಾಲದ ಪ್ರಮುಖ ಸೂತ್ರಧಾರಿಯಾಗಿದ್ದು, ಸಂದೀಪ್ ಲೋಧಾ ಆತನ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಹೆಚ್ಚಿನ ಲಾಭಾಂಶದೊಂದಿಗೆ ಹಾಲು ಮಾರಾಟ ಮಾಡುವ ಉದ್ದೇಶದಿಂದ ನಕಲಿ ಹಾಲನ್ನು ನೈಜ ಹಾಲಿನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಕೆಲವು ರೈತರು, ಪ್ಯಾಕಿಂಗ್ ಕೇಂದ್ರಗಳು ಹಾಗೂ ಶೀತಲ ಕೇಂದ್ರಗಳೂ ಭಾಗಿಯಾಗಿರುವುದು ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಿರುವ ಎಫ್‌ಡಿಎ, ಇನ್ನೂ ಐದು ಸಂಸ್ಥೆಗಳಿಗೆ ಉತ್ಪಾದನೆ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿಗೊಳಿಸಿದೆ.ನಕಲಿ ಹಾಲಿನ ಈ ಜಾಲವು ಮಹಾರಾಷ್ಟ್ರದ ಹೊರ ರಾಜ್ಯಗಳಿಗೂ ವಿಸ್ತರಿಸಿತ್ತೇ ಎಂಬ ಕುರಿತು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ತನಿಖೆ ಮುಂದುವರಿಸಿದೆ.







