Monday, July 13, 2026
spot_imgspot_img
spot_imgspot_img

ಚಲಿಸುತ್ತಿದ್ದ ರೈಲಿನಿಂದ ಜಾರಿ ಬಿದ್ದ ಯುವಕನನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ-ಸಮಯಪ್ರಜ್ಞೆ ಮೆರೆದ ಸಿಬ್ಬಂದಿಗೆ ರೂ.10 ಸಾವಿರ ಬಹುಮಾನ

- Advertisement -
- Advertisement -

ಭಟ್ಕಳ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕನೊಬ್ಬ ನಿಯಂತ್ರಣ ಕಳೆದುಕೊಂಡು ಪ್ಲಾಟ್‌ಫಾರ್ಮ್ ಹಾಗೂ ರೈಲು ನಡುವಿನ ಅಂತರಕ್ಕೆ ಜಾರಲಿದ್ದ ವೇಳೆ, ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದ ಘಟನೆ ರವಿವಾರ ಬೆಳಿಗ್ಗೆ ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.

ಬೆಳಿಗ್ಗೆ ಸುಮಾರು 7.56ರ ವೇಳೆಗೆ ರೈಲು ಸಂಖ್ಯೆ 16312 (ಅಪ್) ನಿಲ್ದಾಣದಿಂದ ಹೊರಡುತ್ತಿದ್ದಾಗ ಮುಹಮ್ಮದ್ ಗೌಫುರ್ (22) ಎಂಬ ಯುವಕ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಮುಂದಾಗಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಪ್ಲಾಟ್‌ಫಾರ್ಮ್ ಹಾಗೂ ರೈಲು ನಡುವಿನ ಅಂತರಕ್ಕೆ ಜಾರಲಾರಂಭಿಸಿದ್ದಾನೆ.ಅದೇ ವೇಳೆ ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕ್ಷಣಮಾತ್ರವೂ ವಿಳಂಬ ಮಾಡದೆ ಯುವಕನ ನೆರವಿಗೆ ಧಾವಿಸಿದ್ದಾರೆ.

ಅವರು ಯುವಕನನ್ನು ಗಟ್ಟಿಯಾಗಿ ಹಿಡಿದು ಪ್ಲಾಟ್‌ಫಾರ್ಮ್ ಕಡೆಗೆ ಎಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರೈಲು ಸಂಪೂರ್ಣವಾಗಿ ನಿಲ್ದಾಣ ದಾಟುವವರೆಗೆ ಯುವಕನನ್ನು ಭದ್ರವಾಗಿ ಹಿಡಿದಿಟ್ಟಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಗಣಪತಿ ನಾಯ್ಕ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಸಾಹಸವನ್ನು ಶ್ಲಾಘಿಸಿರುವ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (CMD) ಸಂತೋಷ್ ಕುಮಾರ್ ಝಾ ಅವರು 10,000 ನಗದು ಬಹುಮಾನ ಘೋಷಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

- Advertisement -

Related news

error: Content is protected !!