ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಬಳಿಕ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.2025ರ ಮೇ 30ರಂದು ಸಂಭವಿಸಿದ ಈ ದುರಂತದಲ್ಲಿ ಅಶ್ವಿನಿ ಅವರ ಇಬ್ಬರು ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದು, ಅಶ್ವಿನಿ ಅವರು ಎರಡೂ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅವರ ಮಾವ ಕೂಡ ಒಂದು ಕಾಲು ಕಳೆದುಕೊಂಡಿದ್ದಾರೆ.

ರಸ್ತೆ ಕಾಮಗಾರಿಯಲ್ಲಿನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೆಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ಗರಿಷ್ಠ ಹಾಗೂ ನ್ಯಾಯಯುತ ಪರಿಹಾರ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.ಅರ್ಜಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗ, ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಉಳ್ಳಾಲ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.ಭೂಕುಸಿತಕ್ಕೆ ರಸ್ತೆ ಕಾಮಗಾರಿಯೇ ಕಾರಣವಾಗಿದೆಯೇ ಎಂಬುದರ ಕುರಿತು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು, ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳ ಅನುಸರಣೆ ಪರಿಶೀಲಿಸಲು ತಜ್ಞರ ತಾಂತ್ರಿಕ ಸಮಿತಿ ರಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.ಮೃತರ ಕುಟುಂಬಗಳು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು ಹಾಗೂ ಆಸ್ತಿ ನಷ್ಟ ಅನುಭವಿಸಿದವರಿಗೆ ಸಮರ್ಪಕ ಪರಿಹಾರ ನೀಡಬೇಕು. ಜೊತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಕೋರಲಾಗಿದೆ.
ಅರ್ಜಿದಾರರ ಪರ ವಕೀಲೆ ಅಕ್ಷತಾ ಶೆಟ್ಟಿ ವಾದ ಮಂಡಿಸಿ, ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸದೇ ಅಧೀನ ಅಧಿಕಾರಿಗಳ ವರದಿಗಳನ್ನು ಆಧರಿಸಿ ಕ್ರಮ ಕೈಗೊಂಡಿರುವುದು ಆಡಳಿತಾತ್ಮಕ ವೈಫಲ್ಯ ಎಂದು ನ್ಯಾಯಾಲಯದ ಗಮನ ಸೆಳೆದರು.ಇಳಿಜಾರು ಪ್ರದೇಶಗಳಲ್ಲಿ ವೈಜ್ಞಾನಿಕ ರೀತಿಯ ಇಳಿಜಾರು ಸ್ಥಿರೀಕರಣ (Slope Stabilization), ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ತಡೆಗೋಡೆಗಳ ನಿರ್ಮಾಣ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.ಹೈಕೋರ್ಟ್ ನೀಡಿರುವ ತುರ್ತು ನೋಟಿಸ್‌ನೊಂದಿಗೆ ಈ ಪ್ರಕರಣವು ರಸ್ತೆ ಕಾಮಗಾರಿಯ ಗುಣಮಟ್ಟ, ಸಾರ್ವಜನಿಕ ಸುರಕ್ಷತೆ ಹಾಗೂ ಆಡಳಿತದ ಹೊಣೆಗಾರಿಕೆಗೆ ಸಂಬಂಧಿಸಿದ ಮಹತ್ವದ ಕಾನೂನು ಹೋರಾಟವಾಗಿ ಪರಿಣಮಿಸಿದ್ದು, ಸರ್ಕಾರದ ಮುಂದಿನ ಕ್ರಮಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.








