ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ ಮೂರು ದಿನಗಳಲ್ಲೇ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15ಕ್ಕೆ ವೃದ್ಧೆ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಇಬ್ಬರು ವ್ಯಕ್ತಿಗಳು ಮನೆ ಬಾಡಿಗೆ ವಿಚಾರಿಸುವ ನೆಪದಲ್ಲಿ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದ ತಕ್ಷಣ ಆರೋಪಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿ ವೃದ್ಧೆಯನ್ನು ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಬಳೆಯನ್ನು ದೋಚಿ ಪರಾರಿಯಾಗಿದ್ದರು. ದೋಚಿದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ₹3 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ರಚಿಸಿದ್ದ ವಿಶೇಷ ತಂಡವು ಖಚಿತ ಮಾಹಿತಿಯ ಮೇರೆಗೆ ಆಗಸ್ಟ್ 7ರಂದು ಮರೋಳಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರು ಬಾಲ ಸುಬ್ರಮಣ್ಯ (49), ಮಟದಕಣಿ, ಉರ್ವ ನಿವಾಸಿ ಹಾಗೂ ಶ್ಯಾಮ್ ಕುಮಾರ್ (33), ತೊಕ್ಕೊಟ್ಟು ಮೂಲದ, ಪ್ರಸ್ತುತ ಮಣ್ಣಗುಡ್ಡ ನಿವಾಸಿಯಾಗಿದ್ದು ಆಟೋ ರಿಕ್ಷಾ ಮಾಲಿಕನಾಗಿದ್ದಾನೆ.
ಬಂಧಿತರಿಂದ ದರೋಡೆ ಮಾಡಲಾಗಿದ್ದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ ಬೈಕ್ನನ್ನೂ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ, ಮುಲ್ಕಿ, ಮಂಗಳೂರು ಪೂರ್ವ, ಮಂಗಳೂರು ಉತ್ತರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಮತ್ತು ಕಳವು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ, ಉಳ್ಳಾಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ, ಕೊಣಾಜೆ ಠಾಣೆಯ ಪಿಎಸ್ಐ ನಾಗರಾಜ್, ಪುನೀತ್ ಗಾಂವಕರ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡದ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತರಿಗೆ ಸುಲಭವಾಗಿ ಬಾಗಿಲು ತೆರೆಯದಂತೆ ಹಾಗೂ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.








