Friday, September 18, 2026
spot_imgspot_img
spot_imgspot_img

ಬೆಂಗಳೂರಿನಲ್ಲಿ ಪತ್ನಿ ಮೇಲೆ ಆ್ಯಸಿಡ್ ದಾಳಿ; ಆರೋಪಿ ಪತಿ ಪೊಲೀಸರ ವಶಕ್ಕೆ

- Advertisement -
- Advertisement -

ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಆಕೆಗೆ ಆ್ಯಸಿಡ್ ಎರಚಿರುವ ಘಟನೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಆ್ಯಸಿಡ್‌ ದಾಳಿಗೊಳಗಾದ ಮಹಿಳೆಯನ್ನು ಕೋಲ್ಕತ್ತಾ ಮೂಲದ ಮಧುಮಿತ(26) ಎಂದು ಗುರುತಿಸಲಾಗಿದ್ದು, ಒಂದೂವರೆ ವರ್ಷಗಳಿಂದ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ತಮಿಳುನಾಡು ಮೂಲದ ಪತಿ ವೆಂಕಟೇಶನ್‌ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಿಗ್ಗೆ 9.15 ರ ಸುಮಾರಿಗೆ ಮಧುಮಿತ ಉಪಾಹಾರ ಸೇವಿಸಲು ಹೊರಗೆ ಹೋದಾಗ, ಬೈಕ್‌ನಲ್ಲಿ ಬಂದ ಪತಿ ವೆಂಕಟೇಶನ್ ಆಕೆಯ ಮೇಲೆ ದಾಳಿ ಮಾಡಿದ್ದಾನೆ.

ವೆಂಕಟೇಶನ್ ಮಚ್ಚಿನಿಂದ ಮಧುಮಿತಾ ಮೇಲೆ ಹಲ್ಲೆ ನಡೆಸಿ, ನಂತರ ಆ್ಯಸಿಡ್ ಎರಚಿದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಗೆ ಕಲ್ಲುಗಳಿಂದ ಹೊಡೆದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಯು ಸಾರ್ವಜನಿಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಹತ್ತಿರದ ಸಿಗ್ನಲ್‌ನಲ್ಲಿ ನಿಯೋಜನೆಗೊಂಡಿದ್ದ ಸಂಚಾರ ಪೊಲೀಸರು ಗದ್ದಲವನ್ನು ಗಮನಿಸಿ, ವೆಂಕಟೇಶನ್‌ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಿದ್ದಾರೆ.

ಜೆ.ಪಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೆಂಕಟೇಶನ್‌ನನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಹಿಂದಿನ ನಿಖರವಾದ ಉದ್ದೇಶವನ್ನು ತಿಳಿಯಲು ಪ್ರಕರಣ ದಾಖಲಿಸಿಕೊಂಡು, ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಮಧುಮಿತಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!