Sunday, July 26, 2026
spot_imgspot_img
spot_imgspot_img

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ನೇಮಕ

- Advertisement -
- Advertisement -

ಹೊಸದಿಲ್ಲಿ: NEET ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಲಾದ್‌ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ ಬಳಿಕ, ಪ್ರಲ್ಲಾದ್ ಜೋಶಿ ಅವರನ್ನು ಶಿಕ್ಷಣ ಸಚಿವರಾಗಿ ನೇಮಿಸಿರುವುದನ್ನು ರಾಷ್ಟ್ರಪತಿ ಭವನ ಶನಿವಾರ ಸಂಜೆ ಪ್ರಕಟಣೆಯಲ್ಲಿ ದೃಢಪಡಿಸಿದೆ.

ಪ್ರಹ್ಲಾದ್ ಜೋಶಿ ಅವರು ಪ್ರಸ್ತುತ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದಾರೆ.ದಿಲ್ಲಿಯ ಜಂತ‌ರ್ ಮಂತರ್‌ನಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿದ್ದ ಪ್ರತಿಭಟನೆಯ 35ನೇ ದಿನ ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ರಾಷ್ಟ್ರವಿರೋಧಿ ಶಕ್ತಿಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಪ್ರಧಾನ್ ತಿಳಿಸಿದ್ದಾರೆ.

“ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನಾನು ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ಬಲಿಷ್ಟ ಎಲ್ಲರನ್ನೂ ಒಳಗೊಂಡ ಮತ್ತು ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯು ಬಲಿಷ್ಠ ರಾಷ್ಟ್ರದ ಅಡಿಪಾಯ ಎಂಬ ನಂಬಿಕೆಯನ್ನು ನಾನು ಸದಾ ಹೊಂದಿದ್ದೇನೆ” ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.ಪ್ರಧಾನ್‌ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ, CJP ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಕೇಂದ್ರ ಸಚಿವರಾದ ಜೆಪಿ ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ, ಕೇಂದ್ರವು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು “ಸದ್ಭಾವನೆಯಿಂದ” ಅಂತ್ಯಗೊಳಿಸಿರುವುದಾಗಿ ಘೋಷಿಸಿದರು.

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜೀತ್‌ ದೀಪೆ ನೇತೃತ್ವದ ಗುಂಪಿನ ಪ್ರಮುಖ ಬೇಡಿಕೆಯಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧದ ಪ್ರತಿಭಟನೆಗೆ ನೇತೃತ್ವ ವಹಿಸುವ ಉದ್ದೇಶದಿಂದ ಅವರು ಇತ್ತೀಚೆಗೆ ಭಾರತಕ್ಕೆ ಮರಳಿದ್ದರು.

- Advertisement -

Related news

error: Content is protected !!