Wednesday, July 22, 2026
spot_imgspot_img
spot_imgspot_img

9ನೇ ತರಗತಿಯಿಂದ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸಿದ CBSE – 2026 ಜುಲೈ 1ರಿಂದ ಜಾರಿ

- Advertisement -
- Advertisement -

ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್-ಎಸ್‌ಇ) 2023 ಕ್ಕೆ ಅನುಗುಣವಾಗಿ, 2026 ಜುಲೈ 1ರಿಂದ ಜಾರಿಗೆ ಬರುವಂತೆ 9ನೇ ತರಗತಿಯಿಂದ ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಘೋಷಿಸಿದೆ.

ಮೇ 15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಮಂಡಳಿಯು, ವಿದ್ಯಾರ್ಥಿಗಳು ಆರ್‌1, ಆರ್‌2 ಮತ್ತು ಆರ್‌3 ಎಂದು ಕರೆಯಲಾಗುವ ಮೂರು ಭಾಷೆಗಳನ್ನು ಅಧ್ಯಯನ ಮಾಡಬೇಕು ಹಾಗೂ ಅವುಗಳಲ್ಲಿ ಕನಿಷ್ಠ ಎರಡು ಭಾರತೀಯ ಸ್ಥಳೀಯ ಭಾಷೆಗಳಾಗಿರಬೇಕು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಲು, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಸಿಬಿಎಸ್‌ಇ ಹೇಳಿದೆ.

ಮೂರನೇ ಭಾಷೆಯ (ಆರ್‌3) ಎಲ್ಲಾ ಮೌಲ್ಯಮಾಪನಗಳನ್ನು ಶಾಲೆಗಳೇ ಆಂತರಿಕವಾಗಿ ನಡೆಸಲಿವೆ ಎಂದು ಮಂಡಳಿ ತಿಳಿಸಿದೆ. ಈ ವಿಷಯದಲ್ಲಿ ವಿದ್ಯಾರ್ಥಿಯ ನಿರ್ವಹಣೆಯನ್ನೂ ಸಿಬಿಎಸ್‌ಇ ಪ್ರಮಾಣಪತ್ರದಲ್ಲಿ ದಾಖಲಿಸಲಾಗುತ್ತದೆ. ಆದರೆ ಆರ್‌3 ಭಾಷೆಯ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗದಂತೆ ತಡೆಯಲಾಗುವುದಿಲ್ಲ ಎಂದಿದೆ.

ಸಿಬಿಎಸ್‌ಇ ಅನುಮೋದಿತ ವಿಷಯಗಳ ಪಟ್ಟಿಯಿಂದ ಶಾಲೆಗಳು ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆಯ್ಕೆ ಮಾಡುವ ಭಾಷೆಗಳಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು. ಮೊದಲ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ ಮಾತ್ರ ವಿದೇಶಿ ಭಾಷೆಗಳನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳಬಹುದು, ಅಥವಾ ಅವುಗಳನ್ನು ಹೆಚ್ಚುವರಿ ನಾಲ್ಕನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಸುತ್ತೋಲೆ ತಿಳಿಸಿದೆ

- Advertisement -

Related news

error: Content is protected !!