Monday, May 13, 2024
spot_imgspot_img
spot_imgspot_img

ಟೋಕಿಯೋ ಒಲಿಂಪಿಕ್ಸ್ ಅಂಗಳಲ್ಲಿ ಪದಕ ಗೆದ್ದ ಸಪ್ತತಾರೆಯರು..! ಇಲ್ಲಿದೆ ಕ್ವಿಕ್ ಸ್ಟೋರಿ..!

- Advertisement -G L Acharya panikkar
- Advertisement -

ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಹಿಂದೆಂದಿಗಿಂತಲೂ ಕಂಡರಿಯದ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದೆ. 7 ಪದಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾದ ಭಾರತೀಯ ಕ್ರೀಡಾಳುಗಳು ಕ್ರೀಡಾಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ಳಿ ಪದಕದೊಂದಿಗೆ ಆರಂಭವಾದ ಪದಕದ ಬೇಟೆ ಚಿನ್ನದೊಂದಿಗೆ ಅಂತ್ಯವಾಯಿತು. ಅಷ್ಟು ಮಾತ್ರವಲ್ಲದೆ ಟೋಕಿಯೋ ಅಂಗಳದಲ್ಲಿ ಹೊಸ ಹೊಸ ಮುಖಗಳು ರಾರಾಜಿಸಿದವು. ಜೊತೆಗೆ ಹೊಸ ದಾಖಲೆಗಳೂ ಮೂಡಿದವು.

4 ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಇದಾಗಿದೆ. ಜಾಗತಿಕ ಮಟ್ಟದ ಕ್ರೀಡಾಕೂಟ ಒಲಿಂಪಿಕ್ಸ್ 2020 ರಲ್ಲಿ ಭಾರತವು 1 ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಂತೆ ಏಳು ಪದಕಗಳೊಂದಿಗೆ ತನ್ನ ಸ್ಮರಣೀಯ ಪ್ರಯಾಣವನ್ನು ಕೊನೆಗೊಳಿಸಿತು. ಭಾರತವು ಮೊದಲ ಬಾರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಏಳು ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 18 ಕ್ರೀಡಾ ವಿಭಾಗಗಳಲ್ಲಿ 126 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದ್ದ ಭಾರತ, ಟೋಕಿಯೊ ಒಲಿಂಪಿಕ್ಸ್ಗೆ ತನ್ನ ಅತಿದೊಡ್ಡ ತಂಡವನ್ನು ಕಳುಹಿಸಿಕೊಟ್ಟಿತ್ತು.

ನೀರಜ್ ಚೋಪ್ರಾ, ಚಿನ್ನದ ಪದಕ (ಜಾವೆಲಿನ್ ಥ್ರೋ)

ಪುರುಷರ ಜಾವೆಲಿನ್ ಥ್ರೋ ಚಿನ್ನದೊಂದಿಗೆ ನೀರಜ್ ಚೋಪ್ರಾ ಭಾರತದ ಎರಡನೇ ವೈಯಕ್ತಿಕ ಒಲಿಂಪಿಕ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಷ್ಟು ಮಾತ್ರವಲ್ಲದೆ ಸ್ವತಂತ್ರ ಭಾರತದ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಥಮ ಕ್ರೀಡಾಳು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಿನ್ನಗೆದ್ದ ನೀರಾಜ್‌ಗೆ ಬಹುಮಾನಗಳ ಸುರಿಮಳೆಯೇ ಬಂದಿದೆ..! ಜೀವನಕಥೆಯೂ ಅಷ್ಟೇ ರೋಚಕವಾಗಿದೆ..!

ಮೀರಾಬಾಯಿ ಚಾನು, ಬೆಳ್ಳಿ, 49 ಕೆಜಿ ವೇಟ್ ಲಿಫ್ಟಿಂಗ್

ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತುವ ಮೂಲಕ ರಜತ ಪದಕಕ್ಕೆ ಮುತ್ತಿಟ್ಟರು. ಒಲಿಂಪಿಕ್ಸ್ನಲ್ಲಿ ಇವರದ್ದೇ ಪದಕದ ಪ್ರಥಮ ಬೇಟೆ..! ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ತಪ್ಪಲಿನಲ್ಲಿರುವ ನೊಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಿಂದ ಬಂದಿರುವ 26 ವರ್ಷದ ಚಾನು ಸ್ಪರ್ಧೆಯ ಮೊದಲ ದಿನವೇ ವೇಟ್ ಲಿಫ್ಟಿಂಗ್ ನಲ್ಲಿ ಪದಕಕ್ಕಾಗಿ ಭಾರತದ 21 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.

ರವಿ ಕುಮಾರ್ ದಹಿಯಾ, ಬೆಳ್ಳಿ, 57 ಕೆಜಿ ಫ್ರೀಸ್ಟೈಲ್ ಕುಸ್ತಿ

ರವಿಕುಮಾರ್ ದಹಿಯಾ ಟೋಕಿಯೊ 2020ರಲ್ಲಿ ಆಡಿದ ತನ್ನ ಮೊದಲ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು. 23 ವರ್ಷದ ರವಿ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಏಳನೇ ಭಾರತೀಯ ಎನಿಸಿಕೊಂಡರು. ರಶ್ಯಾದ ಎರಡು ಬಾರಿ ವಿಶ್ವ ಚಾಂಪಿಯನ್ ಝಾವೂರ್ ಉಗುವ್ ವಿರುದ್ಧ 4-7 ರಿಂದ ಸೋತು ಬೆಳ್ಳಿ ತಮ್ಮದಾಗಿಸಿಕೊಂಡರು. ಸಾಧನೆಯ ಹಾದಿ ಸುಗಮವೂ ಇರಲಿಲ್ಲ.

ಪಿವಿ ಸಿಂಧು, ಕಂಚು, ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್

ಪಿ.ವಿ. ಸಿಂಧು ಒಲಿಂಪಿಕ್ಸ್ ನಲ್ಲಿ ಎರಡು ವೈಯಕ್ತಿಕ ಪದಕವನ್ನು ಜಯಿಸಿರುವ ಮೊದಲ ಭಾರತೀಯ ಮಹಿಳೆ ಎಂದೆನಿಸಿಕೊಂಡಿದ್ದಾರೆ. ರಿಯೋ ಒಲಿಂಪಿಕ್ಸ್ನಲ್ಲಿ ಸಿಂಧು ರಜತಕ್ಕೆ ಮುತ್ತಿಟ್ಟಿದ್ದರು. ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಮೇಲುಗೈ ಸಾಧಿಸಿದ್ದರು. ಮುಂದೆ ನಡೆಯುವ ಒಲಿಂಪಿಕ್ಸ್ನಲ್ಲಿ ಚಿನ್ನ ತನ್ನದಾಗಿಸಿಕೊಳ್ಳಬೇಕೆಂಬುವುದು ಸಿಂಧು ಕನಸು.

ಲವ್ಲಿನಾ ಬೊರ್ಗೊಹೈನ್, ಕಂಚು, ಮಹಿಳಾ ವೆಲ್ಟರ್ ವೈಟ್ ಬಾಕ್ಸಿಂಗ್

ಲವ್ಲಿನಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ತೈಪೆಯ ನಿಯೆನ್-ಚಿನ್ ಚೆನ್ ಅವರನ್ನು ಸೋಲಿಸಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬರ್ಪಥರ್ ಹಳ್ಳಿಯ 23 ವರ್ಷದ ಲವ್ಲಿನಾ ಒಂಬತ್ತು ವರ್ಷಗಳಲ್ಲಿ ಭಾರತೀಯ ಬಾಕ್ಸಿಂಗ್‌ನಲ್ಲಿ ಮೊದಲ ಒಲಿಂಪಿಕ್ಸ್ ಪದಕವನ್ನು ಗೆದ್ದರು. ವಿಜೇಂದರ್ ಸಿಂಗ್ (2008) ಹಾಗೂ ಮೇರಿ ಕೋಮ್ (2012) ಈ ಸಾಧನೆ ಮಾಡಿದ್ದರು.

ಭಾರತೀಯ ಪುರುಷರ ಹಾಕಿ ತಂಡ, ಕಂಚು

1980 ರ ಮಾಸ್ಕೋ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಾಕಿ ವಿಭಾಗದಲ್ಲಿ ಬರದ ಛಾಯೆ ಮೂಡಿತ್ತು. ಭಾರತದ ಪುರುಷರ ಹಾಕಿ ತಂಡವು ರೋಚಕ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿ0ದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ಇದು ಟೋಕಿಯೊ 2020 ಕ್ರೀಡಾಕೂಟದಲ್ಲಿ ಭಾರತದ ಐದನೇ ಪದಕವಾಗಿದೆ.

ಬಜರಂಗ್ ಪುನಿಯಾ, ಕಂಚು, ಪುರುಷರ 65 ಕೆಜಿ ಫ್ರೀಸ್ಟೈಲ್, ಕುಸ್ತಿ

ಕುಸ್ತಿಪಟು ಬಜರಂಗ್ ಪುನಿಯಾ, ಒಲಿಂಪಿಕ್ಸ್ ನಲ್ಲಿ ತನ್ನ ಚೊಚ್ಚಲ ಪ್ರದರ್ಶನದಲ್ಲಿ, ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪ್ಲೇಆಫ್‌ನಲ್ಲಿ ಕಝಖ್ ಸ್ತಾನದ ದೌಲತ್ ನಿಯಾಝ್ ಕೋವ್ ಅವರನ್ನು 8-0 ಅಂತರದಿ0ದ ಸೋಲಿಸಿ ಕಂಚಿನ ಪದಕ ಗೆದ್ದರು. ಇದು ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಆರನೇ ಪದಕವಾಗಿತ್ತು.

ಇಷ್ಟು ಮಾತ್ರವಲ್ಲದೆ ಕಮಲ್ ಪ್ರೀತ್ ಕೌರ್, ಆದಿತಿ ಅಶೋಕ್, ವಿನೇಶ್ ಪೋಗಟ್, ಪುರುಷರ 4*400 ರಿಲೇ ಟೀಮ್, ಮಹಿಳೆಯರ ರಿಲೇ ಟೀಮ್, ಹೀಗೆ ಅನೇಕ ಕ್ರೀಡಾಳುಗಳು ಹೊಸ ದಾಖಲೆಯ ತವಕದಲ್ಲಿ ತಮ್ಮದೇ ಇತಿಹಾಸ ಸೃಷ್ಟಿಸಿದ್ದಾರೆ. ಮೇಲ್ನೋಟಕ್ಕೆ ಸೋಲಾಗಿದ್ದರು ಇದು ಗೆಲುವಾಗಿದೆ. ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಹಾರೈಸಿ ಪ್ರೋತ್ಸಾಹ ನೀಡಿರೋದು ವಿಶೇಷ.

ಬರಹ: ದಿನೇಶ್ ವಿಟ್ಲ

- Advertisement -

Related news

error: Content is protected !!