ಮಂಗಳೂರು : 2026ನೇ ಸಾಲಿನ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಕ್ರೀಡಾ ಕ್ಷೇತ್ರದಿಂದ ರಾಕೇಶ್ ಮಲ್ಲಿ (ಕ್ರಮ ಸಂಖ್ಯೆ 92) ಅವರ ಹೆಸರು ಆಯ್ಕೆಯಾಗಿತ್ತು.
ಭೂಗತ ಲೋಕದ ನಂಟು ಹಾಗೂ ಅಪರಾಧ ಪ್ರಕರಣಗಳ ಹಿನ್ನೆಲೆಯಿಂದ ಮಾಧ್ಯಮಗಳಲ್ಲಿ ಸುದ್ದಿಯಾಗಿರುವ, ತಾನೇ ಮಾಜಿ ಭೂಗತ ಲೋಕದ ವ್ಯಕ್ತಿ ಎಂದು ಹೇಳಿಕೊಂಡಿದ್ದ ರಾಕೇಶ್ ಮಲ್ಲಿ ಅವರಿಗೆ ಇಂತಹ ಪ್ರತಿಷ್ಠಿತ ಗೌರವ ನೀಡಲು ಮುಂದಾಗಿರುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋದ ವ್ಯಕ್ತವಾಗಿತ್ತು.ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ರಾಕೇಶ್ ಮಲ್ಲಿಗೆ ಪ್ರತಿಷ್ಠಿತ ಜಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ವಿವಾದಾತ್ಮಕ ಆಯ್ಕೆಗಳು ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಗೌರವಿಸಲ್ಪಡುವ ಸಾವಿರಾರು ನೈಜ ಸಾಧಕರ ಗೌರವಕ್ಕೂ ಧಕ್ಕೆ ತರುವ ಆತಂಕವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟ ಪೊಲೀಸ್ ದಾಖಲೆಗಳು ಹಾಗೂ ಕ್ರೀಡಾ ಸಾಧನೆಗಳನ್ನು ಪರಿಶೀಲಿಸಿ, ಆಯ್ಕೆಯ ಮಾನದಂಡಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.
ಆಯ್ಕೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಪ್ರಶಸ್ತಿ ಆಯ್ಕೆಯನ್ನು ಮರುಪರಿಶೀಲಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿತ್ತು.ಕರಾವಳಿಯ ಮಣ್ಣಿನಲ್ಲಿ ನಿಜವಾದ ಸಾಧಕರಿಗೆ ಬರವಿಲ್ಲ. ಹಾಗಿರುವಾಗ ಇಂತಹ ವಿವಾದಗಳಿಗೆ ಅವಕಾಶ ಮಾಡಿಕೊಟ್ಟು ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಧಕ್ಕೆ ತರುವುದು ಯಾಕೆ ಎಂದು ಪ್ರಶ್ನಿಸಿದ್ದರು.ಸಾರ್ವಜನಿಕರ ವಲಯದಲ್ಲಿ ಬಾರೀ ಚರ್ಚೆಯಾಗುತ್ತಿದ್ದಂತೆ 2026ನೇ ಸಾಲಿನ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ರಾಕೇಶ್ ಮಲ್ಲಿ ಹೆಸರನ್ನು ಕಿತ್ತೆಸೆದಿದ್ದಾರೆ.ಹಿಂದಿನ ಪಟ್ಟಿಯಲ್ಲಿ ರಾಕೇಶ್ ಮಲ್ಲಿ ಸೇರಿದಂತೆ 96 ಜನರ ಹೆಸರಿನ ಪಟ್ಟಿ ಹೊರಬೀಳುತ್ತದ್ದಂತೆ, ವ್ಯಾಪಕ ವಿರೋದಕ್ಕೆ ಮಣಿದ ಜಿಲ್ಲಾಡಳಿತ ರಾಕೇಶ್ ಮಲ್ಲಿ ಹೆಸರನ್ನು ತೆಗೆದು ಮತ್ತೆ 119 ಜನರ ಹೊಸ ಪಟ್ಟಿಯನ್ನು ಬಿಡುಗಡೆ ಗೊಳಿಸಿದೆ.








