Friday, April 26, 2024
spot_imgspot_img
spot_imgspot_img

8ನೇ ವರ್ಷಕ್ಕೆ ಕಾಲಿಟ್ಟ ಪ್ರಪಂಚದ ಅತಿದೊಡ್ಡ ಹೊರನಾಡ ಉಚಿತ ಕನ್ನಡ ಕಲಿಕಾ ಕೇಂದ್ರ; ಗಲ್ಫ್ ನಲ್ಲಿ ಕನ್ನಡ ಪಾಠಶಾಲೆ

- Advertisement -G L Acharya panikkar
- Advertisement -
driving

ರಾಜ್ಯದೆಲ್ಲೆಡೆ ಕರೋನ ಹಿನ್ನೆಲೆಯಲ್ಲಿ ಶಾಲಾ ತರಗತಿಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ದೂರದ ದುಬೈನಲ್ಲಿ ಕಳೆದ 7 ವರ್ಷಗಳಿಂದ ಸದ್ದಿಲ್ಲದೆ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತ್ತಿರುವ ಕನ್ನಡ ಪಾಠಶಾಲೆ , ದುಬೈ ತನ್ನ 8ನೇ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದೆ.

ದುಬೈನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಮಹಾಪೋಷಕರಾದ , ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ (KNRI ಅಧ್ಯಕ್ಷರು) ಮತ್ತು ಶ್ರೀ ಮೋಹನ್ ನರಸಿಂಹ ಮೂರ್ತಿ (KNRI ಉಪಾಧ್ಯಕ್ಷರು), ಪ್ರಸಕ್ತ ವರ್ಷದ ಆನ್ ಲೈನ್ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿ , ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪಾಠಶಾಲೆ ದುಬೈ ಅನ್ನು ನಡೆಸಿಕೊಂಡು ಬರುತ್ತಿರುವ ಕನ್ನಡ ಮಿತ್ರರು , ಯು.ಎ. ಇ ಸಂಘಟನೆಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪನವರು ಮಾತನಾಡಿ , ಗಲ್ಫ್ ನಲ್ಲಿನ ಎಲ್ಲ ಕನ್ನಡಿಗರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಎಂದು ಕರೆ ನೀಡಿದರು.

ಕನ್ನಡ ಮಿತ್ರರು ಸಂಘಟನೆಯ ಉಪಾಧ್ಯಕ್ಷ ಸಿದ್ದಲಿಂಗೇಶ್ ಅವರು ಶಾಲೆ ನಡೆದು ಬಂದ ದಾರಿ ಕುರಿತು ಮಾತನಾಡಿ ಎಲ್ಲ ಕನ್ನಡಿಗರು ಈ ಬಾರಿಯ ಆನ್ ಲೈನ್ ತರಗತಿಯ ಸದುಪಯೋಗ ಪಡೆದುಕೊಳ್ಳುವಂತೆ ಕರೆಕೊಟ್ಟರು . ಸಂಘಟನೆಯ ಕಾರ್ಯದರ್ಶಿ ಸುನಿಲ್ ಗವಾಸ್ಕರ್ ಅವರು ಕನ್ನಡ ಮಿತ್ರರು , ಯು.ಎ. ಇ ಸಂಘಟನೆಯ ಇತರ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಇನ್ನು ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕಿಯರ ನೇತೃತ್ವ ವಹಿಸಿರುವ ರೂಪ ಶಶಿಧರ್ ಮಾತನಾಡುತ್ತ ಈ ಬಾರಿಯ ಆನ್ ಲೈನ್ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದ ವಿವರಣೆ ನೀಡಿದರು. ಕನ್ನಡ ಮಿತ್ರರು , ಯು.ಎ. ಇ ಸಂಘಟನೆಯ ಖಜಾಂಚಿಗಳಾದ ನಾಗರಾಜ್ ರಾವ್ ಹಾಗೂ ಮಾಧ್ಯಮ ಸಂಚಾಲಕ ಬಾನುಕುಮಾರ್ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

2014 ರಲ್ಲಿ 40 ಮಕ್ಕಳಿಗೆ ಉಚಿತವಾಗಿ ವಾರಾಂತ್ಯದಲ್ಲಿ ಕನ್ನಡ ಕಲಿಸುವ ಮೂಲಕ ಆರಂಭಗೊಂಡ ಈ ಶಾಲೆ ಗೆ ಈ ಬಾರಿ ಆನ್ ಲೈನ್ ಕನ್ನಡ ತರಗತಿಗಳಿಗೆ ಪ್ರವೇಶ ಕೋರಿ ಈ ಬಾರಿ ಮೊದಲ ದಿನದಲ್ಲೇ 300ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರನ್ನು ದಾಖಲಿಸಿರುವುದು ವಿಶೇಷ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ತರಗತಿಗಳು ಆನ್ ಲೈನ್ ಮೂಲಕವೇ ನಡೆಯಲಿದ್ದು ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಶಾಲೆ ಮಾಡಿಕೊಂಡಿದೆ.

ದೂರದ ದುಬೈನಲ್ಲಿ ಕನ್ನಡ ಶಾಲೆಗಳು ಹೇಗಪ್ಪ ಅಂತೀರಾ? ಇಲ್ಲಿದೆ ನೋಡಿ ಶಾಲೆಯ ಪುಟ್ಟ ಪರಿಚಯ:

ಉದ್ಯೋಗ ಅರಸಿ ದೂರದ ಅರಬ್ ಗಣತಂತ್ರ ರಾಷ್ಟ್ರಕ್ಕೆ ಬಂದಿರುವ ಕನ್ನಡಿಗರ ಮಕ್ಕಳಿಗೆ “ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದಮ್ಮನ ಹಕ್ಕು” ಎಂಬ ಘೋಷಣೆಯೊಂದಿಗೆ ಕನ್ನಡ ಮಿತ್ರರು ಎಂಬ ಸಂಘಟನೆ 2014 ರಲ್ಲಿ 40 ಮಕ್ಕಳೊಂದಿಗೆ ಈ ಶಾಲೆ ಆರಂಭಿಸಿತು .ಈ ಶಾಲೆಯಲ್ಲಿ ವಾರಂತ್ಯದಲ್ಲಿ ಮಾತ್ರ ಕನ್ನಡ ಕಲಿಸುವ ಮೂಲಕ ಎಲ್ಲ ಕನ್ನಡಿಗರ ಮಕ್ಕಳು ಕನ್ನಡ ಕಲಿಯಲು ಅನುವು ಮಾಡಿಕೊಟ್ಟಿದೆ.

ಇಲ್ಲಿ ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನೆವರೆಗೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡ ಕಲಿಸಲಾಗುತ್ತಿದೆ. ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಆಸೆಗೆ ಜೊತೆಯಾಗಿ ತಮ್ಮ ವಾರದ ಒಂದು ರಜಾದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡಿಪಿಟ್ಟಿರುವ ನಮ್ಮ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎಂಬುದು ಹೆಮ್ಮೆಯ ವಿಷಯ.

ಇಲ್ಲಿನ ಮಕ್ಕಳಿಗೆ ಕನ್ನಡ ಶಾಲೆ ಎಂದರೆ ಬಹಳ ಅಚ್ಚುಮೆಚ್ಚು. ಕೇವಲ ಮಾತೃ ಭಾಷೆ ಮಾತನಾಡುತ್ತಿದ್ದ ಮಕ್ಕಳು ಕನ್ನಡ ಭಾಷೆ ಓದಲು ಮತ್ತು ಬರೆಯಲು ಶುರು ಮಾಡಿರುವುದು ಈ ಶಾಲೆಗೆ ಅತಿ ದೊಡ್ಡ ಯಶಸ್ಸು ಅನ್ನುತ್ತಾರೆ ಕನ್ನಡ ಮಿತ್ರರು. ಒಟ್ಟಿನಲ್ಲಿ ವಾರಾಂತ್ಯ ಬಂದರೆ ಮಕ್ಕಳ ಜೊತೆ ಹೊರಹೋಗಲು ಯೋಚಿಸುವವರೇ ಇರುವಾಗ ಆ ದಿನ ತಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡ ಕಲಿಸುವ ಮೂಲಕ ದುಬೈನ ಕನ್ನಡ ಪಾಠಶಾಲೆ ಮತ್ತು ಅಲ್ಲಿನ ಪೋಷಕರು ಎಲ್ಲರಿಗೂ ಮಾದರಿ ಆಗಿರುವುದಂತೂ ನಿಜ.

- Advertisement -

Related news

error: Content is protected !!