ವಿಟ್ಲ: ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಟ್ಲ ಹೋಬಳಿಯ 12 ಗ್ರಾಮದ ಗ್ರಾಮಸ್ಥರಿಗೆ ಹಕ್ಕುಪತ್ರ ಹಾಗೂ ಪರಿಹಾರಧನ ಚೆಕ್ ಗಳ ವಿತರಣಾ ಸಮಾರಂಭ ಪಡಿಬಾಗಿಲು ಸರ್ಕಾರಿ ಶಾಲೆಯಲ್ಲಿ ನಡೆಯಿತು.ವಿಟ್ಲ ಹೋಬಳಿಯ 8 ಗ್ರಾಮದ 41 ಮಂದಿಗೆ 94ಸಿ, 94ಸಿಸಿ ಹಕ್ಕು ಪತ್ರ, ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ಗಳನ್ನು ವಿತರಿಸಲಾಯಿತು.ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ಮಳೆಗಾಲದಲ್ಲಿ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಕ್ಕು ಪತ್ರ ನೀಡಲಾಗುತ್ತಿದೆ. ಪ್ರಾಕೃತಿಕ ವಿಕೋಪದವರಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಅದರಂತೆ ಪರಿಹಾರ ಚೆಕ್ ಗಳನ್ನು ವಿತರಿಸಲಾಗಿದೆ. ಕಡು ಬಡವರಿಗೆ ನಿವೇಶನ ನೀಡಲಾಗುತ್ತಿದೆ. ಜನರಿಗೆ ತೊಂದರೆ ಆಗಬಾರದು ಎಂಬ ನೆಲೆಯಲ್ಲಿ ಕೊರೊನಾದ ನಡುವೆಯೂ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಗಿದೆ.


ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೊಡಂದೂರು ಮಾತನಾಡಿ ಜನರಿಗೆ ಸರ್ಕಾರದ ಸೌಲಭ್ಯ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜನರ ಕುಟುಂಬದ ನಿರ್ವಹಣೆಗೆ ಸರ್ಕಾರ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಕೇಪು ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ತಾರಾನಾಥ ಆಳ್ವ, ಉಪತಹಶೀಲ್ದಾರ ರವಿಶಂಕರ್, ವಿವಿಧ ಗ್ರಾಮದ ಗ್ರಾಮ ಕರಣಿಕರು ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ ಸ್ವಾಗತಿಸಿದರು. ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ವಂದಿಸಿದರು.


