ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿಗೆ ವಿಶ್ವದಾದ್ಯಂತ ಹಲವಾರು ಕಟ್ಟರ್ ಅಭಿಮಾನಿಗಳಿದ್ದಾರೆ. ಧೋನಿಯನ್ನೇ ಆರಾಧ್ಯ ದೈವವೆಂದು ಪೂಜಿಸುವವರು ಕೂಡ ಇದ್ದಾರೆ. ಧೋನಿ ಫಾರ್ಮ್ನಲ್ಲಿ ಇರಲಿ ಬಿಡಲಿ, ಏನೇ ಆದರೂ ಕಿಂಚಿತ್ತೂ ಕೂಡ ಧೋನಿ ಮೇಲಿನ ಅವರ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ. ಧೋನಿ ಮೇಲೆ ಅವರಿಗೆ ಇರುವುದು ಬರಿ ಪ್ರೀತಿಯಲ್ಲ ಬೆಟ್ಟದಷ್ಟು ಅಭಿಮಾನ.
ಸಾಮಾನ್ಯವಾಗಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಧೋನಿ ಫೋಟೋ ಹಿಡಿದು ಬರುವುದು, ಮೈಗೆಲ್ಲ ಧೋನಿ ಹೆಸರು, ಫೋಟೋ ಚಿತ್ರಿಸಿಕೊಂಡು ಬರುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಅಭಿಮಾನಿ ತನ್ನ ಇಡೀ ಮನೆಗೆ ಸಿಎಸ್ಕೆ ಕಲರ್ ಹೊಡಿಸಿದ್ದಾನೆ. ಈ ಸೂಪರ್ ಅಭಿಮಾನಿಯ ಹೆಸರು ಗೋಪಿ ಕೃಷ್ಣನ್. ಅವರ ಕುಟುಂಬ ನೆಲೆಸಿರುವುದು ತಮಿಳುನಾಡಿನ ಅರಂಗೂರ್ನಲ್ಲಿ.
ಅವರು ತಮ್ಮ ಮನೆಗೆ ಧೋನಿ ನೇತೃತ್ವದ ಸಿಎಸ್ಕೆ ತಂಡದ ಹಳದಿ ಬಣ್ಣದ ಪೇಯಿಂಟ್ ಅನ್ನು ಹಾಕಿಸಿದ್ದಾರೆ. ‘ಚೆನ್ನೈಗೆ ವಿಸಲ್ ಪೊದು’ ಎಂದು ಬರೆಯಿಸಿದ್ದಾರೆ.
ಮನೆಯ ಮುಖ್ಯ ದ್ವಾರದಲ್ಲಿ ‘ಹೋಮ್ ಆಫ್ ಧೋನಿ ಫ್ಯಾನ್’ ಎಂದು ಬರೆಯಿಸಿಕೊಂಡಿದ್ದಾರೆ. ಒಟ್ಟಾರೆ ಪೂರ್ಣ ಮನೆಯನ್ನು ಸಿಎಸ್ಕೆ ಕಲರ್ ಆಗಿ ಬದಲಾಯಿಸಿ ಧೋನಿಯ ಮೇಲಿನ ತನ್ನ ಉತ್ಕಟ ಪ್ರೀತಿಯನ್ನು ತೋರಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂಪರ್ ಅಭಿಮಾನಿಯ ಪ್ರೀತಿಗೆ ಟ್ವಿಟ್ಟಿಗರೆಲ್ಲ ಮೆಚ್ಚಿಕೊಂಡಿದ್ದಾರೆ.