Tuesday, November 3, 2026
spot_imgspot_img
spot_imgspot_img

ಬಸ್ ಪ್ರಯಾಣ ದುಬಾರಿ: KSRTC, BMTC ಸೇರಿ 4 ನಿಗಮಗಳ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ

- Advertisement -
- Advertisement -

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಸಂಬಂಧ ನಾಳೆಯೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ನವೆಂಬರ್ 5ರ ಗುರುವಾರದಿಂದಲೇ ಪರಿಷ್ಕೃತ ದರ ರಾಜ್ಯಾದ್ಯಂತ ಜಾರಿಗೆ ಬರುವ ನಿರೀಕ್ಷೆಯಿದೆ.

ದರ ಏರಿಕೆಯ ಪ್ರಮಾಣವನ್ನು ನಿರ್ಧರಿಸಲು ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಉನ್ನತಾಧಿಕಾರಿಗಳ ಜೊತೆ ಸಾರಿಗೆ ಸಚಿವ ಬೈರತಿ ಸುರೇಶ್ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ KSRTC, BMTC, NWKRTC, KRTC ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ವಿಭಾಗದ ಅಧಿಕಾರಿಗಳು, ಮುಖ್ಯ ಹಣಕಾಸು ಭದ್ರತಾ ಅಧಿಕಾರಿಗಳು (CFSO) ಹಾಗೂ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಬಿಎಂಟಿಸಿ – ಪ್ರಸ್ತುತ ನಗರ ಸಾರಿಗೆಯಲ್ಲಿ ಪ್ರತಿ 2 ಕಿ.ಮೀ. ಅನ್ನು ಒಂದು ಹಂತ (ಸ್ಟೇಜ್) ಎಂದು ಪರಿಗಣಿಸಲಾಗುತ್ತಿದ್ದು, ಕನಿಷ್ಠ ದರ 6 ರೂ. ಇದೆ. ಇದನ್ನು 10 ರೂ.ಗೆ ಹೆಚ್ಚಿಸುವ ಪ್ರಸ್ತಾಪವಿದೆ.

ಕೆಎಸ್‌ಆರ್‌ಟಿಸಿ – ನಿಗಮದಲ್ಲಿ ಪ್ರತಿ 6.5 ಕಿ.ಮೀ. ಅನ್ನು ಒಂದು ಹಂತ ಎಂದು ಪರಿಗಣಿಸಲಾಗಿದ್ದು, ಸಾಮಾನ್ಯ ಬಸ್‌ಗಳಲ್ಲಿ ಹಾಲಿ ಇರುವ 6 ರೂ. ದರವನ್ನು 10 ರೂ. ಕ್ಕೆ ಏರಿಸುವ ಸಾಧ್ಯತೆಯಿದೆ.

ಎಕ್ಸ್‌ಪ್ರೆಸ್ ಬಸ್‌ಗಳು – ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಪ್ರಸ್ತುತ ಪ್ರತಿ ಹಂತಕ್ಕೆ 12 ರೂ. ದರವಿದ್ದು, ಇದನ್ನು 15 ರೂ. ಅಥವಾ 18 ರೂ.ಗೆ ಪರಿಷ್ಕರಿಸುವ ಸಾಧ್ಯತೆ ಇದೆ.

ಟಿಕೆಟ್ ದರ ಏರಿಕೆಗೆ ಮುಂದಾಗಿರುವ ಕ್ರಮವನ್ನು ಸಾರಿಗೆ ಇಲಾಖೆ ಬಲವಾಗಿ ಸಮರ್ಥಿಸಿಕೊಂಡಿದೆ.ಕಳೆದ 11 ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ಟಿಕೆಟ್ ದರವನ್ನು ಕೇವಲ ಒಂದು ಬಾರಿ ಮಾತ್ರ ಹೆಚ್ಚಿಸಲಾಗಿದೆ. ಈ ಸುದೀರ್ಘ ಅವಧಿಯಲ್ಲಿ ಡೀಸೆಲ್ ಬೆಲೆ ಮತ್ತು ವಾಹನ ನಿರ್ವಹಣಾ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿವೆ.

ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲೇ 5 ಬಾರಿ ಇಂಧನ ದರ ಹೆಚ್ಚಿಸಿದೆ. ಇದರಿಂದ ನಿಗಮಗಳ ಮೇಲೆ ಭಾರೀ ಆರ್ಥಿಕ ಹೊರೆ ಬಿದ್ದಿದ್ದು, ಸಂಸ್ಥೆಗಳ ಉಳಿವಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ನೆರೆರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಲೂ ಬಸ್ ಟಿಕೆಟ್ ದರ ಕಡಿಮೆಯಿದೆ.

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ‘ಶಕ್ತಿ ಯೋಜನೆ’ಯ ಶೇ. 100ರಷ್ಟು ಮೊತ್ತವನ್ನು ರಾಜ್ಯ ಸರ್ಕಾರವು ನಿಗಮಗಳಿಗೆ ನಿಯಮಿತವಾಗಿ ಮರುಪಾವತಿಸುತ್ತಿದೆ. ಹೀಗಾಗಿ ಯೋಜನೆಗೂ ನಷ್ಟಕ್ಕೂ ಸಂಬಂಧವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ದರ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದಷ್ಟು ದರ ವಿಧಿಸಿದರೆ ಜನರಿಗೆ ಭಾರಿ ಹೊರೆಯಾಗಲಿದೆ. ಆ ಕಾರಣದಿಂದ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ಹಂತ ಹಂತವಾಗಿ ಕಡಿಮೆ ಪ್ರಮಾಣದಲ್ಲಿ ಮಾತ್ರ ದರ ಹೆಚ್ಚಿಸಲು ನಿರ್ಧರಿಸಲಾಗಿದೆ.

- Advertisement -

Related news

error: Content is protected !!