


ಬರೋಬ್ಬರಿ 31 ತಿಂಗಳ ನಂತರ ಟಿಡಿಪಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿಯೇ ವಿಧಾನಸಭೆ ಪ್ರವೇಶಿಸುವ ಮೂಲಕ ಪ್ರತಿಜ್ಞೆ ಈಡೇರಿಸಿದ್ದಾರೆ.
ವೈಎಸ್‌ಆರ್ ಪಕ್ಷದ ಮುಖಂಡರ ತೀವ್ರ ನಿಂದನೆಯಿಂದ ನೊಂದು ಕಣ್ಣೀರಿಟ್ಟಿದ್ದ ಚಂದ್ರಬಾಬು ನಾಯ್ಡು ಸಿಎಂ ಆಗಿಯೇ ಮತ್ತೆ ಆಂಧ್ರ ಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ 2021ರ ನವೆಂಬರ್‌ನಲ್ಲಿ ಶಪಥ ಮಾಡಿದ್ದರು.
ಅದರಂತೆ ಮುಂದೆ ಎರಡು ವರ್ಷಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಭರ್ಜರಿ ಬಹುಮತದೊಂದಿಗೆ ಗೆದ್ದು ಸರ್ಕಾರ ರಚನೆ ಮಾಡಿದ್ದು, ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. 175 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಬರೋಬರಿ 135 ಸೀಟುಗಳನ್ನು ಗೆದ್ದಿದ್ದರೆ ಮಿತ್ರಪಕ್ಷ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ 21 ಸೀಟುಗಳನ್ನು ಗೆದ್ದಿತ್ತು.
ಇಂದು ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯ ಮೆಟ್ಟಿಲುಗಳಿಗೆ ಸಿಎಂ ಚಂದ್ರಬಾಬು ನಮಸ್ಕಾರ ಮಾಡಿದರು. ಸದನ ಪ್ರವೇಶಿಸುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸತ್ಯ ಗೆದ್ದಿದೆ. ಪ್ರಜಾಪ್ರಭುತ್ವ ಉಳಿದಿದೆ ಎಂದು ಟಿಡಿಪಿ ಶಾಸಕರು ಭಿತ್ತಿಪತ್ರ ಪ್ರದರ್ಶಿಸಿ ಸಂಭ್ರಮಿಸಿದರು.