

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡಿದ್ದು, ದೇಶ-ವಿದೇಶ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ತಮ್ಮ ಪಕ್ಷದ ಕಾರ್ಯಕರ್ತೆಯರು, ಸರ್ಕಾರಿ ಮಹಿಳಾ ಅಧಿಕಾರಿಗಳು, ಜೆಡಿಎಸ್ ಮುಖಂಡರ ಹೆಂಡತಿಯರನ್ನು ಪ್ರಜ್ವಲ್ ಲೈಂಗಿಕವಾಗಿ ಬಳಿಸಿಕೊಂಡಿರುವ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಪ್ರಜ್ವಲ್ ಅಣ್ಣ ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ವಿರುದ್ಧವೂ ಸಹ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನನ್ನು ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿರುವ ಬಗ್ಗೆ ಜೆಡಿಎಸ್ ಕಾರ್ಯಕರ್ತ, ಸಿಎಂ, ಗೃಹ ಸಚಿವರು, ಡಿಜಿ ಮತ್ತು ಐಜಿಪಿ ಮತ್ತು ಹಾಸನ ಎಸ್ಪಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ತಮ್ಮ ಪ್ರಜ್ವಲ್ ಇನ್ನೂ ಎಸ್ಐಟಿ ವಶದಲ್ಲಿರುವಾಗಲೇ ಅಣ್ಣ ಸೂರಜ್ ವಿರುದ್ಧ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಸೂರಜ್ ರೇವಣ್ಣ ಜೆಡಿಎಸ್ ವಿಧಾನಪರಿಷತ್ ಸದಸ್ಯರಾಗಿದ್ದರಿಂದ ಈ ಪ್ರಕರಣವೂ ಸಹ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮೊದಲೇ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ರೇವಣ್ಣ, ದೇವೇಗೌಡರ ಕುಟುಂಬ ಮುಜುಗರ ಅನುಭವಿಸಿದೆ.








