

ವಯನಾಡು ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.
ವಯನಾಡು ಅಕ್ಷರಶಃ ದುರಂತ ಭೂಮಿಯಾಗಿದೆ. ಚೂರಲ್ಮಾಲ, ಮುಂಡಕ್ಕೈ ಹಾಗೂ ಅಟ್ಟಮಾಲ ಊರುಗಳು ಅಲ್ಲಿ ಇದ್ದವೇ ಎನ್ನುವ ಪ್ರಶ್ನೆ ಮೂಡುವಂತೆ ಭೂಕುಸಿತ ಮಾಡಿದೆ. ಭೀಕರ ದುರಂತದಲ್ಲಿ ಬದುಕುಳಿದವರಿಗೆ ಮುಂದಿನ ಜೀವನ ಹೇಗೆ ಎನ್ನುವ ಪ್ರಶ್ನೆ ಕಣ್ಣ ಮುಂದೆ ಸಿಡಿಲಿನಂತೆ ಬಡಿಯುತ್ತಿದೆ. ಸದ್ಯ ಸಂತ್ರಸ್ಥರ ಕಷ್ಟ ಯಾರಿಗೂ ಬೇಡವಾಗಿದೆ. ಆದರೆ ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮ ಜೊತೆ ನಾವಿದ್ದೇವೆಂದು 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ವಯನಾಡಿನಲ್ಲಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ಕರ್ನಾಟಕ ಸರ್ಕಾರ ನಿಂತಿದೆ. ಮಾನವೀಯ ನೆಲೆಯಲ್ಲಿ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮನೆ ನಿರ್ಮಾಣ ಮಾಡಿಕೊಡಲಿದೆ. ಈ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಭರವಸೆ ನೀಡಲಾಗಿದೆ. ಈಗ ಅವರಿಗೆ ಕಷ್ಟ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ಅವರ ಜೊತೆ ನಿಂತು ಭರವಸೆ ಮರಳಿ ಕಟ್ಟೋಣ ಎಂದು ಹೇಳಿದ್ದಾರೆ.
ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಮೊದಲು ಕೇರಳದ ನೆರವಿಗೆ ಧಾವಿಸಿದ್ದರಿಂದ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೈ ನಾಯಕಿ ಪ್ರಿಯಾಂಕಾ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿಮ್ಮ ಸ್ಪಂದನೆಗೆ ನಮನ. 100 ಮನೆಗಳನ್ನು ಕಟ್ಟಿಕೊಡುವ ಭರವಸೆ ನೀಡಿದ್ದಕ್ಕೆ ಸಿಎಂ ಹಾಗೂ ಕರ್ನಾಟಕದ ಜನರಿಗೆ ಕಾಂಗ್ರೆಸ್ ನಾಯಕರು ಎಕ್ಸ್ ಅಕೌಂಟ್ನಲ್ಲಿ ಧನ್ಯವಾದ ತಿಳಿಸಿ ಪೋಸ್ಟ್ ಶೇರ್ ಮಾಡಿದ್ದಾರೆ.